ಬಂಟ್ವಾಳ:ರಾಜ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಮತ್ತು ಪ್ರತಿಷ್ಠಿತ ನೃಪತುಂಗ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ ನಿರಾಡಂಬರ ಸಾಹಿತಿ ದೇವನೂರ ಮಹದೇವರ ಕೃತಿಯಲ್ಲಿ ಮಾನವೀಯತೆ ಸತ್ವ ಅಡಗಿದೆ ಎಂದು ಸಂಸ್ಕೃತ ವಿದ್ವಾಂಸ ಶ್ರೀನಿಧಿ ಅಭ್ಯಂಕರ ಮೂಡುಬಿದ್ರೆ ಹೇಳಿದ್ದಾರೆ.ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೈರೋಡಿ ಮನೆಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ‘ಈ ಹೊತ್ತಿಗೆ ಈ ಹೊತ್ತಗೆ ದೇವನೂರ ಮಹದೇವರ ಎದೆಗೆ ಬಿದ್ದ ಅಕ್ಷರ’ ಕೃತಿ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಸಿದ್ಧಾಂತಕ್ಕೆ ಕಟ್ಟು ಬೀಳದೆ ವಾಸ್ತವಾಂಶ ತೆರದಿಟ್ಟ ಈ ಕೃತಿಯಲ್ಲಿ ಪ್ರತಿ ಅಧ್ಯಾಯವೂ ಓದುಗರಲ್ಲಿ ಚಿಂತನೆ ಹಚ್ಚಿ ವಿವೇಕ ಮೂಡಿಸುತ್ತದೆ. ಸಾಹಿತಿ ಮತ್ತು ಸಾಹಿತ್ಯಕ್ಕೆ ಯಾವುದೇ ಜಾತಿ, ಭಾಷೆ, ಧರ್ಮಗಳ ಭೇದ ಸಲ್ಲದು ಎಂದು ಅವರು ವಿವರಿಸಿದರು.ಕಾರ್ಯಕ್ರಮ ಸಂಚಾಲಕ, ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಆತ್ಮಚರಿತ್ರೆಗೆ ಹೊಸ ಭಾಷ್ಯ ಬರೆದಿದೆ ಎಂದರು.
ಸಾಹಿತಿಗಳಾದ ಸದಾನಂದ ನಾರಾವಿ, ಮಹಮ್ಮದ್ ಮೂಡುಬಿದ್ರೆ, ಕವಿತಾ ಕೂಡ್ಲು ಮತ್ತಿತರರು ಇದ್ದರು.ಯುವ ಸಾಹಿತಿ, ಉಪನ್ಯಾಸಕ ಡಾ.ಯೋಗೀಶ ಕೈರೋಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
