ಗುರುಪುರ: ಗುರುಪುರ ಗೋಳಿದಡಿಗುತ್ತಿನ ವರ್ಸೊದ ಪರ್ಬೊದ ಅಂಗವಾಗಿ ಮಹಕಾಲೇಶ್ವರ ವೇದಿಕೆಯಲ್ಲಿ ನಡೆಯುತ್ತಿರುವ ಗುತ್ತು ನಿಮಗೆಷ್ಟು ಗೊತ್ತು ವಿಚಾರಗೋಷ್ಠಿಯಲ್ಲಿ ಗುತ್ತುಗಳ ಗಡಿಕಾರರ ಗಡಿ ನಿರ್ವಹಣೆ ಮತ್ತು ನಡೆ ನುಡಿ ವಿಷಯದಲ್ಲಿ ಸಾಮಾಜಿಕ ದೃಷ್ಟಿಕೋನ ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ವಿಚಾರದಲ್ಲಿ ವಿಚಾರ ಮಂಡನೆ ನಡೆಯಿತು.
ಸಾಮಾಜಿಕ ದೃಷ್ಟಿಕೋನದ ಬಗ್ಗೆ ವಿಚಾರ ಮಂಡನೆ ನಡೆಸಿದ ತಿಂಗಳೆ ಮನೆತನ ಹೆಬ್ರಿಯ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತಾಡಿ, ಹಿಂದಿನ ಕಾಲದಲ್ಲಿ ಪ್ರತಿ ಜಾತಿಯ ಗಡಿಕಾರರನ್ನು ಒಪ್ಪಿಕೊಳ್ಳಲಾಗಿತ್ತು. ಅವರು ಹೇಳಿದ ಮಾತುಗಳನ್ನು ಜನರು ಆಲಿಸುತ್ತಿದ್ದರು. ದೈವದ ಕೆಲಸ ಮಾಡುವಾಗ ಎಲ್ಲರೂ ಒಟ್ಟಾಗುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಈ ವೇಳೆ ಗಡಿಕಾರರು ಆಡುವ ನುಡಿ, ಪ್ರಸಾದ ನೀಡುವುದು ಇತ್ಯಾದಿಗಳನ್ನು ಜನರು ಗಮನಿಸುತ್ತಾರೆ. ಗಡಿಕಾರರು ನುಡಿ ಕೊಡುವಾಗ ದೈವವೇ ಗಡಿಕಾರನ ಮೂಲಕ ಮಾತಾಡಿಕೊಂಡಿತು. ಇದನ್ನೇ ವೇದವಾಕ್ಯ ಎಂದು ಒಪ್ಪಿಕೊಳ್ಳುತ್ತಿದ್ದರು. ಆದರೆ ಭೂಸುಧಾರಣೆ ಕಾನೂನು ಬಂದ ಬಳಿಕ ಈ ವ್ಯವಸ್ಥೆ ನಿಂತಿತು. ಇದು ಮತ್ತೆ ಪುನಃಶ್ಚೇತನಗೊಳ್ಳಬೇಕು ಎಂದು ನುಡಿದರು.

DSC_6426
ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ಬಗ್ಗೆ ವಿಚಾರ ಮಂಡನೆ ನಡೆಸಿದ ವೇದ ವಿದ್ವಾಂಸ ಡಾ| ಯಾಜಿ ನಿರಂಜನ್ ಭಟ್, ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಘಟನೆಯನ್ನು ಉದಾಹರಿಸಿ ರಾಜನಾದವ ಹೇಗಿರಬೇಕು ಎಂಬ ಬಗ್ಗೆ ತಿಳಿಸಿದರು. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ರಾಜ ಯುಧಿಷ್ಠಿರನಿಗೆ ರಾಜನ ಕರ್ತವ್ಯಗಳ ಬಗ್ಗೆ ವಿವರಿಸಿ ಗ್ರಾಮ ರಾಜ್ಯದ ಬಗ್ಗೆ ಉಲ್ಲೇಖಿಸಿದ್ದರು. ಒಬ್ಬ ಚಕ್ರವರ್ತಿಯಿಂದ ಭಾರತ ದೇಶವನ್ನು ಆಳಲು ಸಾಧ್ಯವಾಗದು ಎಂಬ ಕಾರಣಕ್ಕೆ ಗ್ರಾಮರಾಜ್ಯ ಸೂಕ್ತ. ಯಾವುದೇ ಜಾತಿಯನ್ನು ನೋಡದೆ ಗ್ರಾಮದಲ್ಲಿ ಒಬ್ಬ ಸಮರ್ಥನನ್ನು ಆಯ್ಕೆ ಮಾಡಿ ಗ್ರಾಮಪಥಿಯನ್ನಾಗಿ ಆಯ್ಕೆ ಮಾಡಿ, ಅರಣ್ಯಭಾಗ. ಕೃಷಿ ಭೂಮಿ ಸೇರಿ ಇಂಥ ಹತ್ತು ಗ್ರಾಮ ಘಟಕಕ್ಕೆ ದಶಪತಿ, ಶತಪತಿ, ಸಹಸ್ರಪತಿ…. ಹೀಗೆ ಒಬ್ಬೊಬ್ಬರನ್ನು ನಿಯೋಜಿಸಲಾಗುತ್ತಿತ್ತು. ಅಧಿಕಾರದ ವಿಕೇಂದ್ರಿಕರಣಕ್ಕಾಗಿ ಇರುವ ಗ್ರಾಮ ರಾಜ್ಯ ವ್ಯವಸ್ಥೆಯ ಮುಖ್ಯಸ್ಥನನ್ನು ಇಂದು ಗಡಿಕಾರರು ಎಂದು ಕರೆಯಬಹುದು ಎಂದು ತಿಳಿಸಿದರು.

DSC_6431
ಈ ವೇಳೆ ಮಾತಾಡಿದ ಗೋಳಿದಡಿಗುತ್ತು ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ಮಾತಾಡಿ, ಧರ್ಮಾಧರಿತ, ದೈವಿಕ ಶಕ್ತಿಯ ಸುಧನ್ವನನಿಂದ ಬಂದ ಆಡಳಿತ ವ್ಯವಸ್ಥೆಯಯು ಗಡಿಕಾರರ ಮೂಲಕ ಚೆನ್ನಾಗಿ ನಿರ್ವಹಣೆಗೊಳ್ಳುತ್ತಿತ್ತು. ಭೂಸುಧಾರಣೆಯ ಬಳಿಕ ದೈವ ದೇವರುಗಳಿಗೆ ಬಿಟ್ಟಿದ್ದ ಜಾಗ ಹೋಯಿತು. ಆದರೂ ಗುತ್ತಿನವರು ಬೊಂಬಾಯಿಗೆ ತೆರಳಿ ಸಂಪಾದಿಸಿ ಮತ್ತೆ ಗಡಿಕಾರರಾಗಿದ್ದಾರೆ. ಇಂಥ ವ್ಯವಸ್ಥೆಯನ್ನು ಉಳಿಸಬೇಕು ಎಂದರು.

DSC_6434
ಗುತ್ತು-ಬೀಡು ವ್ಯವಸ್ಥೆ ಬ್ರಿಟಿಷರಿಗಿಂತ ವೈದಿಕ ಬ್ರಾಹ್ಮಣರಿಂದ ಸೊರಗಲು ಸಾಧ್ಯವಿದೆಯೇ?
ಪ್ರಶ್ನೋತ್ತರ ಸಮಯದಲ್ಲಿ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರು ಉತ್ತರಿಸಿ, ಈ ಪದ್ಧತಿ ಬ್ರಿಟಿಷರಿಂದಲೇ ಸಾಕಷ್ಟು ನಾಶಗೊಂಡಿದೆ. ಯಾಕೆಂದರೆ ಬ್ರಿಟಿಷರು ಧಾರ್ಮಿಕ ಪಂಡಿತರನ್ನು ಬಿಟ್ಟು ತಾವೇ ಆಯ್ಕೆ ಮಾಡಿದ ಪಂಡಿತತನ್ನು ನಿಯೋಜಿಸಿ ಧಾರ್ಮಿಕ ಕೃತಿಗಳನ್ನು ತನಗೆ ಇಷ್ಟಬಂದಂತೆ ಬದಲಿಸಿದ್ದಾರೆ. ಮನುಸ್ಮøತಿಯನ್ನೂ ಬ್ರಿಟಿಷರೇ ನಾಶಮಾಡಿ ಬೇರೆಯದ್ದೇ ಬರೆದರು. ಕೆಲವು ರಹಸ್ಯಗಳು ಗೊತ್ತಿಲ್ಲದೆ ಗಡಿಕಾರರ ಮನೆಯಿಂದಲೇ ರಹಸ್ಯ ಕಣ್ಮರೆಯಾಗಿದೆ. ಅಲ್ಲದೆ ಇಂದಿನ ಶಿಕ್ಷಣ ಜ್ಞಾನಾರ್ಜನೆಗೆ ಆಗಿರದೆ ಅಂಕ ಗಳಿಕೆಯೇ ಆಗಿರುವುದರಿಂದ ಇಂದು ಇನ್ನಷ್ಟು ನಾಶಗೊಂಡಿತು. ಈ ಪದ್ಧತಿ ಪುರೋಹಿತ ಶಾಹಿಯಿಂದ ನಾಶವಾಗಲಿಲ್ಲ.
ನವೀನ್ ಶೆಟ್ಟಿ ಎಡ್ಮೆಮಾರು ನಿರೂಪಿಸಿದರು. ಸುನಿಲ ಪ್ರಭಾಕರ ಶೆಟ್ಟಿ ಧನ್ಯವಾದಗೈದರು.

By suddi9

Leave a Reply

Your email address will not be published. Required fields are marked *