ಇನ್: ಸಮಸ್ಯೆಗಳ ಸುಲಿಯಲ್ಲಿ ಗುರುಪುರ ನಾಡಕಚೇರಿ
ಕೈಕಂಬ: ಕೈಕಂಬದಲ್ಲಿರುವ ಗುರುಪುರ ನಾಡಕಚೇರಿಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಬ್ಬಂದಿ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಕಂದಾಯ ಅಧಿಕಾರಿ ಆಸಿಫ್ ಅಲಿ ಅವರು ನಾಡಕಚೇರಿಯ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಂಡರು. ಮುಖ್ಯವಾಗಿ ನಾಡಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಗುರುಪುರ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಪ್ರತಿ ದಿನಕ್ಕೆ ಜಾತಿ ಆದಾಯ, ಅಂಗವಿಕಲ, ಮನಸ್ವಿನಿ, ಖಾತೆ ಬದಲಾವಣೆ ಇತ್ಯಾದಿ ಸೇರಿ 50ಕ್ಕಿಂತಲೂ ಅಧಿಕ ಅರ್ಜಿಗಳು ಬರುತ್ತಿದ್ದು, ವಿಲೇವಾರಿ ನಡೆಸಲಾಗುತ್ತಿಲ್ಲ. ಇಂಟೆರ್ನೆಟ್ ಹಾಗೂ ಸರ್ವರ್ ಸಮಸ್ಯೆ ಇದ್ದು, ಅರ್ಜಿಗಳು ಉಳಿದುಕೊಳ್ಳುವುದರಿಂದ ಗ್ರಾಹಕರು ಪರದಾಡಬೇಕಾಗುತ್ತದೆ. ಸರ್ವರ್ ಹಾಗೂ ಇಂಟರ್ನೆಟ್ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ ಎಂದು ಸಿಬ್ಬಂದಿ ತಿಳಿಸಿದರು.
ಕಳೆದ ಬಾರಿ ಕಚೇರಿ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಕಚೇರಿಗೆ ಅಗತ್ಯವೆನಿಸುವ ಸಿಸಿ ಕೆಮರಾ ಅಳವಡಿಸಿಲ್ಲ. ಶೌಚಾಲಯ ಇಲ್ಲದಿರುವುದರಿಂದ ಕಂದಾವರ ಪಂಚಾಯತ್ನ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಜೊತೆಗೆ ನಾಡಕಚೇರಿ ಚಿಕ್ಕದಾಗಿರುವುದರಿಂದ ಜನರಿಗೂ ಸಮಸ್ಯೆಯುಂಟಾಗುತ್ತಿದೆ. ಆಧಾರ್ ಎಂಟ್ರಿ ಮಾಡಲು ಸರ್ವರ್ ಹಾಗೂ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಆಧಾರ್ ಮಾಡಿಸಲು ಬರುವ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಭರತ್ ಭರವಸೆ
ಕಚೇರಿ ಸಿಬ್ಬಂದಿಯ ಸಮಸ್ಯೆ ಆಲಿಸಿದ ಭರತ್ ಶೆಟ್ಟಿಯವರು ನಾಡಕಚೇರಿಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲಾಗುವುದು ಎಂದರು. ಕಚೇರಿಗೆ ಬರುವ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಬೇಕು. ಅರ್ಜಿಗಳನ್ನು ಸ್ವೀಕರಿಸಿ ಯಾರಿಗೂ ತೊಂದರೆಯಾಗದಂತೆ ವರ್ತಿಸಬೇಕು. ಸಿಬ್ಬಂದಿಯ ಸಮಸ್ಯೆಯನ್ನು ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಪ್ರಸ್ತಾಪಿಸಿ ಬಗೆಹರಿಸಲಾಗುವುದು. ಶೌಚಾಲಯ ನಿರ್ಮಾಣ, ನಾಡಕಚೇರಿಯ ಕಟ್ಟಡ ವಿಸ್ತಾರಗೊಳಿಸುವುದರ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಸರ್ವರ್ ಹಾಗೂ ನೆಟ್ವರ್ಕ್ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೂಡಲೇ ಪ್ರಸ್ತಾಪಿಸಿ ಶೀಘ್ರವಾಗಿ ಬಗೆಹರಿಸಲಾಗುವುದು ಎಂದರು. ಗ್ರಾಹಕರ ಸಮಸ್ಯೆಯನ್ನು ಆಲಿಸುವ ಸಲುವಾಗಿ ನಾಡಕಚೇರಿಯ ಮುಂಭಾಗ ಕಂಪ್ಲೈಂಡ್ ಬಾಕ್ಸ್ ಅಳವಡಿಸುವಂತೆ ಭರತ್ ಶೆಟ್ಟಿ ಸೂಚನೆ ನೀಡಿದರು. ಗ್ರಾಹರಕರು ಸಮಸ್ಯೆ, ಸಲಹೆ ಸೂಚನೆಗಳನ್ನು ಕಂಪ್ಲೈಂಡ್ ಬಾಕ್ಸ್ನಲ್ಲಿ ಬರೆದುಹಾಕಿದರೆ ಸಮಸ್ಯೆಯನ್ನು ಅರ್ಥಮಾಡಿಕೊಂಡು ಬಗೆಹರಿಸಲು ಸಾಧ್ಯವಾಗುತ್ತದೆ. ಇದರ ಒಂದು ಕೀಯನ್ನು ತನ್ನಲ್ಲೇ ಇಟ್ಟುಕೊಂಡು ಆವಾಗಾವಾಗ ಬಂದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಸಿಬ್ಬಂದಿ ಜೊತೆ ಮಾತನಾಡಿದ ಭರತ್ ಅವರು ಎಲ್ಲರ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳಿದ್ದರೆ ಆತಂಕವಿಲ್ಲದೆ ತಿಳಿಸಿ, ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಭರತ್ ಶೆಟ್ಟಿ ಜೊತೆ ಬಿಜೆಪಿ ಮುಖಂಡರಾದ ಸೋಹನ್ ಅಧಿಕಾರಿ ಸೇರಿ ಹಲವರು ಇದ್ದರು.
ಖಾಯಂಗೊಸಿಲ್ಲ ಎಂದು ಕಣ್ಣೀರು!
ಖಾಸಗಿಯಾಗಿ ಕೆಲಸ ಮಾಡುವ ಕ್ಲೆರ್ಕ್ ಗುಲಾಬಿ ಅವರು ಶಾಸಕರ ಬಳಿ ಕಣ್ಣೀರು ಹರಿಸಿ ತಮ್ಮ ಸಮಸ್ಯೆ ತೋಡಿಕೊಂಡರು. ಕಳೆದ ಮೂವತ್ತು ವರ್ಷಗಳಿಂದ ಖಾಸಗಿಯಾಗಿ ಸೇವೆ ಸಲ್ಲಿಸುತ್ತಿದ್ದು ಇಂದಿಗೂ ನನ್ನ ಕೆಲಸ ಖಾಯಂಗೊಳಿಸಿಲ್ಲ. ನನ್ನ ನಿವೃತ್ತಿಗೆ ಕೇವಲ ನಾಲ್ಕು ವರ್ಷ ಇದ್ದು ಖಾಯಂಗೊಳಿಸದ ಕಾರಣ ಭಡ್ತಿ ಪಡೆಯಲೂ ಸಾಧ್ಯವಾಗಿಲ್ಲ. ಇಷ್ಟು ಸುಧೀರ್ಘ ಸೇವೆ ಸಲ್ಲಿಸಿದರೂ ಕೆಲವರು ಕೆಲವರ ಮೋಸದಿಂದಾಗಿ ನನ್ನ ಕೆಲಸ ಖಾಯಂಗೊಳ್ಳದಂತೆ ನೋಡಿಕೊಂಡಿದ್ದಾರೆ. ನನ್ನ ವಾರಗೆಯವರು ಮುಂಬಡ್ತಿ ಪಡೆದು ತಹಶೀಲ್ದಾರಿ ಆಗಿ ಭಡ್ತಿ ಪಡೆದರೂ ನಾನಿಂದೂ ಖಾಸಗಿಯಾಗಿ ಕೆಲಸ ಮಾಡುವಂತಾಗಿದೆ. ಕಚೇರಿಯಲ್ಲಿ ಸಾಕಷ್ಟು ಒತ್ತಡದ ಕೆಲಸವಿದೆ. ಕಳೆದ ಬಾರಿ ನಮ್ಮ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಾಗ ನಾನು ರಜೆಯಲ್ಲಿದ್ದೆ. ಮನೆಗೆ ಹೋಗಲು ದಿನಕ್ಕೆ ನೂರು ರೂ. ಬೇಕಾಗಿದೆ ಎಂದು ಸಮಸ್ಯೆ ತೋಡಿಕೊಂಡರು. ಸಮಸ್ಯೆ ಆಲಿಸಿದ ಭರತ್ ಶೆಟ್ಟಿ ಅವರು ತುರ್ತಾಗಿ ಹುದ್ದೆ ಖಾಯಂಗೊಳಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬಾಕ್ಸ್
ನಾಡಕಚೇರಿಯ ಬಗೆಗಿನ ಗೊಂದಲಗಳ ಬಗ್ಗೆ ಈ ಮುಂಚೆ ಜಯಕಿರಣ ಸಮಗ್ರ ವರದಿಯ ಮೂಲಕ ಬಿಚ್ಚಿಟ್ಟಿತ್ತು. ಇದೀಗ ಸ್ವತಃ ಶಾಸಕರೇ ಆಗಮಿಸಿ ಸಮಸ್ಯೆಗಳನ್ನು ಆಲಿಸಿದ್ದಾರೆ. ನಾಡಕಚೇರಿ ಇನ್ನಾದರೂ ಜನಸ್ನೇಹಿಯಾಗಿರಬೇಕು ಎಂಬ ಆಗ್ರಹ ಕೇಳಿಬಂದಿದೆ.

