ಬೆಳಗಾವಿ:ಕ್ಷುಲಕ ಕಾರಣಕ್ಕೆ ಎರಡು ಕೋಮುಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆಸಿದ್ದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುಂಪು ಘರ್ಷಣೆಯಿಂದಾಗಿ ಬೆಳಗಾವಿಯಲ್ಲಿ ಆಂತಕದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರು ಇಂದು ಮಧ್ಯಾರಾತ್ರಿ 12 ಗಂಟೆಯವರೆಗೂ ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಘರ್ಷಣೆಗೆ ಸಂಬಂಧಿಸಿದಂತೆ 12 ಜನರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಖಡಕ್ ಗಲ್ಲಿ, ಚಾವಟಗಲ್ಲಿ, ಖಂಜರಗಲ್ಲಿಯಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಎರಡು ಕೋಮುಗಳ ಜನರು ಕೈಯಲ್ಲಿ ಮಚ್ಚು, ಲಾಂಗುಗಳಿಂದ ಬಂಡಿದಾಡಿದ್ದಾರೆ. ಘರ್ಷಣೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಕಾರು ಬೈಕ್ ಸೇರಿದಂತೆ 30ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಐದು ಕಾರುಗಳನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಾರೆ.
ಬೂದಿ ಮುಚ್ಚಿದ ಕೆಂಡಂತಿರುವ ಬೆಳಗಾವಿಯಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಸೆಕ್ಷನ್ 144 ಜಾರಿ ಮಾಡಲಾಗಿದೆ. ಬೆಳಗಾವಿಯ ಖಡಕ್ಗಲ್ಲಿ, ಚಾವಟಗಲ್ಲಿ, ಖಂಜರಗಲ್ಲಿಗೆ ತಹಶೀಲ್ದಾರ್ ಪ್ರೀತಿಮ್ ನರಸಾಪುರೆ ಭೇಟಿ ನೀಡಿದರು. ನಂತರ ಸಾರ್ವಜನಿಕರು ಶಾಂತ ರೀತಿಯಿಂದ ಇರಬೇಕೆಂದು ತಹಶೀಲ್ದಾರ್ ಮನವಿ ಮಾಡಿದ್ದಾರೆ.