ಬೆಳಗಾವಿ: ಕರ್ನಾಟಕದ ಬೆಳಗಾವಿ ಹಾಗೂ ಯರಹಟ್ಟಿ ನಡುವೆ ಸಂಚರಿಸುವ ರಸ್ತೆಯು ದೇಶದ ಮೊದಲ ಅಪಘಾತ ನಿಯಂತ್ರಕ ಮಾದರಿ ರಸ್ತೆ ಎಂದು ವಿಶ್ವ ಬ್ಯಾಂಕ್ ಶ್ರೇಷ್ಠ ರ್ಯಾಂಕ್ ನೀಡಿ ಅಭಿನಂದಿಸಿದೆ.
ಈ ರಸ್ತೆಯು ಇತ್ತೀಚೆಗಷ್ಟೆ ಮೇಲ್ದರ್ಜೆಗೇರಿಸಲ್ಪಟ್ಟಿದ್ದ ರಸ್ತೆ 62ಕಿ.ಮೀ ಇದ್ದು ದೇಶದ ಸ್ಪೇಷಲ್ ಕ್ಯಾರಿಯರ್ ಡೆಮಾನ್‍ಸ್ಟ್ರೇಷನ್ ಪ್ರೋಗ್ರಾಂ ಮಾದರಿ ರಸ್ತೆಯಾಗಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. 2016ರಲ್ಲಿ ಈ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು ಒಂದೂವರೆ ವರ್ಷಗಳಲ್ಲಿ ಪೂರ್ಣವಾಗಿ ಕಾಮಗಾರಿ ಮುಗಿದಿದ್ದು, ಇದೇ ಜುಲೈನಲ್ಲಿ ಉದ್ಘಾಟನೆಗೊಂಡಿತ್ತು.

ರಸ್ತೆ ಅಪಘಾತವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಎಸ್‍ಸಿಡಿಪಿ ಯೋಜನೆಯಲ್ಲಿ ಬೆಳಗಾವಿ-ಯರಹಟ್ಟಿ ನಡುವಿನ ರಸ್ತೆ ಗುರುತಿಸಲಾಗಿದ್ದು, ಈ ರಸ್ತೆಯಲ್ಲಿ ಒಟ್ಟು 45 ಜಂಕ್ಷನ್‍ಗಳಿದೆ. ಈ ರಸ್ತೆಯಲ್ಲಿ ಅತ್ಯಧಿಕ ಅಪಘಾತಗಳು ಸಂಭವಿಸಿದ್ದ ಕಾರಣ ರಾಜ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿಶ್ವ ಬ್ಯಾಂಕ್ ಒಟ್ಟಾಗಿ 29ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಮಾಡುವಲ್ಲಿ ಮಾದರಿ ರಸ್ತೆ ರೂಪಿಸಿದೆ. ಈ ರಸ್ತೆಯಲ್ಲಿ 12 ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು, 36 ಹಂಪ್ಸ್‍ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇಷ್ಟೆ ಅಲ್ಲದೆ ಜಂಕ್ಷನ್‍ಗಳ ಆಕಾರವನ್ನು “ವೈ” ನಿಂದ “ಟಿ” ಆಗಿ ಮಾರ್ಪಡಿಸಲಾಗಿದೆ. ರಸ್ತೆಯಲ್ಲಿ ಭಾರೀ ವಾಹನದ ಚಾಲನೆಗೆ ಅನುಕೂಲವಾಗುವಂತೆ ಟ್ರಕ್ ಹಾಗೂ ಬಸ್ ವೇಗಳನ್ನು ನಿರ್ಮಿಸಲಾಗಿದೆ.
ವಿಶ್ವ ಬ್ಯಾಂಕ್ ಯೋಜನೆ ಕುರಿತಂತೆ ಮೆಚ್ಚುಗೆ ಸೂಚಿಸಿದ್ದು, ದೇಶದ ಇತರೆ ರಾಜ್ಯಗಳೂ ಸಹ ಇದೇ ಮಾದರಿಯನ್ನು ಅನುಸರಿಸುವಂತೆ ಹೇಳಿದೆ.
ಈ ಮಾದರಿ ರಸ್ತೆ ವ್ಯಾಪ್ತಿಯಲ್ಲಿ ರಸ್ತೆ ನಿಯಮಾವಳಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆರ್.ಟಿ.ಒ, ಪಿಡಬ್ಲ್ಯೂಡಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಂದು ತಿಂಗಳ ಕಾಲ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶುಕ್ರವಾರ ಬೆಳಗಾವಿಯ ಪೋಲಿಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿ ಇದಕ್ಕೆ ಚಾಲನೆ ನೀಡುವರು.
