ಬಂಟ್ವಾಳ:ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಗಾಂಜಾ ಮತ್ತಿತರ ಡ್ರಗ್ ಮಾಫಿಯಾ ಬಗ್ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಶಾಸಕರು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.ಮಂಗಳೂರಿನ ಬೆಂಗ್ರೆ ಪ್ರದೇಶದಲ್ಲಿ ಈಚೆಗೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮನೆಗೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಜಿಲ್ಲೆಯಲ್ಲಿ ಮರಳು ಮಾಫಿಯಾ ಮಾದರಿಯಲ್ಲಿ ಡ್ರಗ್ ಮಾಫಿಯಾ ಕೂಡ ಸರ್ಕಾರವನ್ನು ತನ್ನ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಇದರಿಂದಾಗಿ ಯುವಜನತೆ ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಮುಂದಾಗಿ ಜಿಲ್ಲೆಯ ಹೆಸರನ್ನು ಕೆಡಿಸಲು ಕಾರಣವಾಗುತ್ತದೆ. ಮಾತ್ರವಲ್ಲದೆ ಇದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಹೇಯ ಕೃತ್ಯ ಜಿಲ್ಲೆಯಲ್ಲಿ ಮರುಕಳಿಸದಂತೆ ಪೊಲೀಸ್ ಇಲಾಖೆ ಡ್ರಗ್ ಮಾಫಿಯಾಗಳಿಗೆ ಕಡಿವಾಣ ಹಾಕಬೇಕು. ಮಾತ್ರವಲ್ಲದೆ ತೀರಾ ಬಡತನದಲ್ಲಿರುವ ಸಂತ್ರಸ್ತೆ ಕುಟುಂಬಕ್ಕೆ ಸರ್ಕಾರ ಕೂಡಲೇ ಗರಿಷ್ಟ ಮೊತ್ತದ ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.
ಅತಿವೃಷ್ಟಿಗೆ ರೂ 720 ಕೋಟಿ ಪರಿಹಾರ:
ಈ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಟ್ಟು ರೂ 720 ಕೋಟಿ ಮೊತ್ತ ಘೋಷಿಸಿದ್ದು, ಈ ಪೈಕಿ ರೂ 546.21 ಕೋಟಿ ಮೊತ್ತದ ಅನುದಾನ ಬಿಡುಗಡೆಗೊಳಿಸಿದೆ ಎಂದು ಅವರು ತಿಳಿಸಿದರು.
ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ ಅಮ್ಟೂರು, ಪ್ರಮುಖರಾದ ಪಿ.ಎಸ್.ಮೋಹನ್, ರಮಾನಾಥ ರಾಯಿ ಮತ್ತಿತರರು ಇದ್ದರು.
