ಮೂಡುಬಿದಿರೆ: ವಿಷಮತೆ ಇಳಿಮುಖವಾಗುವುದಕ್ಕೆ ವಚನ ಸಾಹಿತ್ಯ ಮತ್ತು ಆಧ್ಯಾತ್ಮ ಚಿಂತನೆಯೆ ಮುಖ್ಯ ಕಾರಣ, ಆತ್ಮ ಸದೃಶ್ಯವಾದ ಬದುಕನ್ನು ಕಟ್ಟುವುದಕ್ಕೆ ಬೆಳಕು ಹಿಡಿದಿದ್ದೇ ವಚನ ಸಾಹಿತ್ಯವೆಂದು ಡಾ. ವಿಜಯಕುಮಾರ್ ಎಸ್. ಕಟಗಿಹಳ್ಳಿಮಠ ಹೇಳಿದರು.

ಆಳ್ವಾಸ್‍ನುಡಿಸಿರಿಯ `ಕರ್ನಾಟಕ ದರ್ಶನ; ಆಧ್ಯಾತ್ಮ ಪರಂಪರೆ’ ವಿಚಾರಗೋಷ್ಠಿಯಲ್ಲಿ ವಚನ ಸಾಹಿತ್ಯದ ಕುರಿತು ಅವರು ಮಾತನಾಡಿದರು.
ಭಾರತದಲ್ಲಿ ಬಹುತ್ವ, ಬಹು ಸಂಸ್ಕøತಿ, ಬಹು ಸಿದ್ದಾಂತಗಳನ್ನು ಒಳಗೊಂಡ ದೇಶದಲ್ಲಿ ವಚನ ಸಾಹಿತ್ಯ ಕನ್ನಡಿಯಂತೆ ಬದುಕಿನ ಮೇಲೆ ಪ್ರತಿಬಿಂಬಿಸುತ್ತಾ ಬಂದಿದೆ.
ಪ್ರಚಾರ ಸಂಸ್ಕಾರವಾಗಿ ಆರಂಭಗೊಂಡ ವಚನ ಸಾಹಿತ್ಯ ಆಧ್ಯಾತ್ಮ ಪರಂಪರೆಯನ್ನು ಉಳಿಸುವುದಕ್ಕೆ ಬಹು ಆಯಾಮಗಳಲ್ಲಿ ಪ್ರಯತ್ನಿಸಿದೆ. ಬದುಕನ್ನು ಸುಂದರವಾಗಿ ಕಟ್ಟಲು ನೆರವಾಗಿದ್ದೇ ವಚನ ಸಾಹಿತ್ಯದ ಪರಂಪರೆ. ಆದ್ದರಿಂದ ವಚನ ಸಾಹಿತ್ಯ ಈ ಶತಮಾನಕ್ಕೂ ಪ್ರಸ್ತುತ. ವಚನ ಸಾಹಿತ್ಯ ಯಾವುದೇ ಸಿದ್ಧಾಂತಕ್ಕೆ ಅಥವಾ ತತ್ವಕ್ಕೆ ಪರವಾಗಿಯೂ, ವಿರುದ್ಧವಾಗಿಯೂ ಇರದೇ ಮಾನವನ ಬದುಕಿನ ವಿಕಾಸಕ್ಕೆ ದಾರಿ ತೋರಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ, ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಎಸ್. ಘಂಟಿ ಉಪಸ್ಥಿತರಿದ್ದರು.

