ಬಂಟ್ವಾಳ: ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಮಾಜಿ ವಲಯಾಧ್ಯಕ್ಷ ದಿವಂಗತ ಎಂ.ದೇವಪ್ಪ ಶೆಟ್ಟಿ ಮಾವಂತೂರು ಇವರ ಸ್ಮರಣಾರ್ಥ ರೂ 5.5ಲಕ್ಷ ವೆಚ್ಚದ ನೂತನ ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ದುರ್ಗಾದಾಸ ಶೆಟ್ಟಿ ಮಾವಂತೂರು ಇವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವೇದಾನಂದ ಕಾರಂತ ಮಾತನಾಡಿ, ಸರ್ಕಾರಿ ಶಾಲೆ ಉಳಿವು ಮತ್ತು ಅಭಿವೃದ್ಧಿಗೆ ಸರ್ಕಾರದ ಜೊತೆಗೆ ನಾಗರಿಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜೇಸಿ ರಾಷ್ಟ್ರೀಯ ತರಬೇತುದಾರ ಜಯಾನಂದ ಪೆರಾಜೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಜೊತೆಗೆ ಮಕ್ಕಳ ಹೆತ್ತವರಿಗೂ ಮಹತ್ತರ ಜವಾಬ್ದಾರಿ ಇದೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಮುಖ್ಯಶಿಕ್ಷಕ ಸುಧೀರ್ ಜಿ.ಮತ್ತಿತರರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಕುಸುಮಾ, ಯಶೋಧ, ಗುತ್ತಿಗೆದಾರ ರಂಜನ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್ ಕೆ.ಶ್ರೀಯಾನ್ ರಾಯಿ, ಕೆ.ಪರಮೇಶ್ವರ ಪೂಜಾರಿ, ಜಿ.ದಾಮೋದರ ಬಂಗೇರ, ರಾಜೇಶ ಗೋವಿಂದಬೆಟ್ಟು, ರಾಜೇಶ ಜೈನ್ ಪಡ್ರಾಯಿ, ಗಿರೀಶ ಶೆಟ್ಟಿ ಅರಳ, ಮಂಜಪ್ಪ ಅರಳ, ಶಿಕ್ಷಕಿ ನಿವೇದಿತಾ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ನೂತನ ರಂಗ ಮಂದಿರಕ್ಕೆ ಪುರೋಹಿತ ರಾಜಾರಾಮ ಭಟ್ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ನಾಗರಾಜ ಸ್ವಾಗತಿಸಿ, ರಮೇಶ ಮಯ್ಯ ವಂದಿಸಿದರು. ಶ್ರೀಷ ಭಟ್ ಕಾರ್ಯಕ್ರಮ ನಿರೂಪಿಸಿದರು.
