ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ನಲ್ಲಿ ಅಡಿನೋ ಬಳಕೆಯ ಕುರಿತಂತೆ 2 ದಿವಸಗಳ ಕಾರ್ಯಗಾರ ಅಕ್ಟೋಬರ್ 15 ಹಾಗು 16 ರಂದು ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಇವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಚಿಣ್ಣರ ಚಿಂತನಾಶೀಲತೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವಂತೆ ಮಾಡುವ ನಿಟ್ಟಿನಲ್ಲಿ ರೂಪುಗೊಂಡ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಹಳ್ಳಿಯ ಯುವಕರ ಚಿಂತನೆಯನ್ನು ದಿಲ್ಲಿಯವರೆಗೂ ಕೊಂಡೊಯ್ಯುವಲ್ಲಿ ಈ ಯೋಜನೆ ಒಂದು ಪ್ರಬಲ ಸಾಧನವಾಗಿ ಕಂಗೊಳಿಸುತ್ತಿದೆ. ಹಳ್ಳಿ-ಹಳ್ಳಿಯ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಜಾರಿಗೊಳಿಸಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ತಾವು ವೈಜ್ಞಾನಿಕತೆಯ ಕಡೆ ಮುಖಮಾಡುವಂತೆ ಮಾಡಿವೆ ಎಂದು ಹೇಳಿದರು.
ಮೂಡುಬಿದಿರೆ ವಲಯದಲ್ಲಿ ಎ.ಟಿ.ಎಲ್. ಪ್ರಪ್ರಥಮವಾಗಿ ಅನುಷ್ಠಾನಗೊಂಡ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯದ್ದು ಪ್ರಯೋಗಾಲಯ ಆರಂಭಗೊಂಡಂದಿನಿಂದ ಇಲ್ಲಿಯವರೆಗೆ ಜಿಲ್ಲಾಮಟ್ಟದ ವಿಜ್ಞಾನಮೇಳ, ಪರಿಣಿತರಿಂದ ವಿದ್ಯಾರ್ಥಿಗಳಿಗೆ ಉಪಕರಣಗಳ ಬಗ್ಗೆ ತರಬೇತಿ ಸೇರಿದಂತೆ ಹತ್ತು ಹಲವು ಕಾರ್ಯಗಾರಗಳನ್ನು ಕೈಗೊಂಡಿದ್ದು ದಿನನಿತ್ಯವು 2 ಘಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪ್ರಯೋಗಾಲಯದಲ್ಲಿ ಚಟುವಟಿಕಾಶೀಲರನ್ನಾಗಿಸುತ್ತಿದೆ.
ಎ.ಟಿ.ಎಲ್ನ ಸಂಯೋಜಕರಾದ ಶಿವಪ್ರಸಾದ್ರವರು ಮಾತನಾಡಿ, ಕೇಂದ್ರ ಸರ್ಕಾರದ ಅನುದಾನವೂ ಸೇರಿದಂತೆ, ಸಂಸ್ಥೆಯ ಅದ್ಯಕ್ಷರಾದ ಯುವರಾಜ್ ಜೈನ್ ಹಾಗು ಕಾರ್ಯದರ್ಶಿ ರಶ್ಮಿತ ಯುವರಾಜ್ ಜೈನ್ ಇವರ ಸಮರ್ಥ ಬೆಂಬಲ, ಸಹಕಾರ ಪ್ರಯೋಗಾಲಯವನ್ನು ಇನ್ನಷ್ಟು ಸುಸರ್ಜ್ಜಿತ ಗೊಳಿಸುವಲ್ಲಿ ಸಹಕಾರಿಯಾಗಿದೆ. ಸಂಸ್ಥೆಯ ಕನಸಾದ “ಅನ್ವೇಷಣಾ ಪ್ರವೃತ್ತಿ”ಯನ್ನು ಮಕ್ಕಳಲ್ಲಿ ಹುಟ್ಟುಹಾಕುವಲ್ಲಿ ಈ ಯೋಜನೆ ನಿಜಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
90ಕ್ಕೂ ಅಧಿಕ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು, ನಿತ್ಯ ಜೀವನದ ಹಲವು ಸಮಸ್ಯೆಗಳಿಗೆ ಎ.ಟಿ.ಎಲ್ ಯಾವ ರೀತಿ ಪೂರಕವಾಗಬಲ್ಲದು ಎನ್ನುವುದಕ್ಕೆ ತಮ್ಮ ವಿವಿಧ ಯೋಜನೆಗಳ ಮೂಲಕ ಸಾಕ್ಷಿಯಾದರು. ತರಬೇತುದಾರರಾಗಿ ವಿ.ವಾಕ್ಸನ್ ಮಧುಕೃಷ್ಣ ಇವರು ಭಾಗವಹಿಸಿದ್ದರು.
