ಕೈಕಂಬ:ನಮ್ಮ ಸುತ್ತಮುತ್ತ ಇರುವ ಪಕ್ಷಿಗಳ ಬದುಕಿಗೆ ನಾವು ತೊಂದರೆ ಕೊಡುವುದು ತರವಲ್ಲ, ಮಾನವನ ಸ್ವಾರ್ಥಕ್ಕೆ ಪಕ್ಷಿ ಸಂಕುಲ ಅಳಿವಿನಂಚಿಗೆ ಸಾಗದಿರಲಿ. ಪಕ್ಷಿಗಳನ್ನು ಉಳಿಸಲು ನಮ್ಮ ಕೈಯ್ಯಲ್ಲಾಗುವ ಕೆಲಸ ಮಾಡೋಣ ಎಂದು ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದರು.
ಇವರು ಗಂಜಿಮಠ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಲ್ಪಾಡಿ ಇಲ್ಲಿ ನಡೆದ `ಗುಬ್ಬಚ್ಚಿ ಗೂಡು’ ಎಂಬ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಗುಬ್ಬಚ್ಚಿಗೂಡಿನ ರಮ್ಯ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪಕ್ಷಿ-ಪತಂಗಗಳ ಉಳಿಸುವಲ್ಲಿ ಯುವ ಮನಸ್ಸು ಸಿದ್ಧವಾಗಬೇಕಾಗಿದೆ ಎಂದರು. ವಿವಿಧ ಪಕ್ಷಿಗಳ ಇಂಚರವನ್ನು ಕೇಳಿಸಿ ಪಕ್ಷಿ ಲೋಕದ ಉಳಿವಿಗೆ ಪಣ ತೊಡಿ ಎಂದು ಕರೆ ನೀಡಿದರು.
ಸಿಂಥಿಯಾ ಎಫ್. ನೊರೋಹ್ನಾ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ, ಅಪೋಲಿನಾರಿಸ್ ಡಿ’ಸೋಜಾ ಹಾಗೂ ಅತಿಥಿ ಶಿಕ್ಷಕಿ ಶುಭಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರಿಡುವ ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ ಪ್ರಾತ್ಯಕ್ಷಿಕೆ ನೀಡಲಾಯಿತು.
