ಅಜೆಕಾರು: ಜನಪ್ರಿಯ ಹಾಸ್ಯ ಧಾರಾವಾಹಿಗಳ ನಡುವೆ ಕಲರ್‍ಸ್ ಸೂಪರ್ ಚಾನಲ್‌ನಲ್ಲಿ ಸಂಜೆ ೬.೦೦ ರಿಂದ ಪ್ರಸಾರವಾಗುತ್ತಿರುವ ಜನಪ್ರಿಯ “ಧಾರಾವಾಹಿ ಇವಳೇ ವೀಣಾಪಾಣಿ” ತಂಡ ಮೂರನೇ ಬಾರಿಗೆ ಕಾರ್ಕಳ ತಾಲೂಕಿನ ವರಂಗದಲ್ಲಿ ಚಿತ್ರೀಕರಣಕ್ಕೆ ಆಗಮಿಸಿದೆ.ಕಥಾನಾಯಕ ಮಯೂರನ ವಿವಾಹ ಸಂದರ್ಭದ ಪ್ರಮುಖ ಕುತೂಹಲಕಾರಿ ದೃಶ್ಯಗಳಿಗೆ ವರಂಗದ ಐತಿಹಾಸಿಕ
ಜೈನ ಬಸದಿಯ ಸುತ್ತಮುತ್ತ ಶುಕ್ರವಾರದಿಂದ ನಾಲ್ಕು ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ತಂಡದ ಕ್ರಿಯೇಟಿವ್ ಹೆಡ್ ಗಿರೀಶ್ ಮಾಧ್ಯಮ್ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದರು._U8A2172
ನಟರಾಗಿ, ಅನೇಕ ಧಾರವಾಹಿಗಳಿಗೆ ಚಿತ್ರಕಥೆ- ಸಂಭಾಷಣೆಗಳನ್ನು ಬರೆದು ಖ್ಯಾತಿ ಪಡೆದಿರುವ ಸುಜಯ್ ಹುಣಸೂರು ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ” ಇವಳೇ ವೀಣಾಪಾಣಿ ಎರಡೇ ತಿಂಗಳಲ್ಲಿ ಜನಮನಗೆದ್ದಿದೆ. ಅದಕ್ಕೆ ಕಾರಣ ಕರಾವಳಿ ಸಹಿತ ನಾಡಿನ ಸಮಸ್ತ ವೀಕ್ಷಕರು. ನಮ್ಮ ಕಥೆಗೆ ಈ ಪ್ರದೇಶ-ಪರಿಸರ ಬಹಳಚೆನ್ನಾಗಿ ಹೊಂದಿಕೊಳ್ಳುವುದರಿಂದ ಈ ಪ್ರದೇಶದಲ್ಲಿ ಮತ್ತೆ ಚಿತ್ರೀಕರಣಕ್ಕೆ ಬಂದಿದ್ದೇವೆ” ಎಂದು ಹುಣಸೂರುಅಭಿಪ್ರಾಯ ಪಡುತ್ತಾರೆ.
“ಎರಡು ಸಿನಿಮಾಗಳ ಬಳಿಕ ಈ ಧಾರಾವಾಹಿಯ ನಾಯಕನ ಉತ್ತಮ ಪಾತ್ರ ದೊರಕಿದೆ. ಮತ್ತೆ ಸಿನಿಮಾ ರಂಗಕ್ಕೆ ಬರುವ ಕನಸಿಗೆ ಈ ಜನಪ್ರಿಯತೆ ಖಂಡಿತಾ ಪ್ಲಸ್ ಆಗುತ್ತದೆ. ಕರಾವಳಿಯ ಈ ಭಾಗದ ಪರಿಸರಕ್ಕೆ ಬರುವುದೆಂದರೆ ಬಾರಿ ಖುಷಿ” ಎಂದು ಮಯೂರನಾಗಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಅರವ್ ಸೂರ್ಯ ಸಂತೋಷ ವ್ಯಕ್ತ ಪಡಿಸಿದರು.
ಕೆರೆ ಬಸದಿಯ ಹಿನ್ನಲೆಯಲ್ಲಿ ಬಸದಿಗೆ ಬರುವ ಹಾದಿಯಲ್ಲಿ ನಾಯಕಿಯನ್ನು ಕೊಲ್ಲುವ ಹುನ್ನಾರ, ಅದ್ಯಾವುದರ ಪರಿವೆಯು ಇಲ್ಲದೆ ದೇವರ ದರ್ಶನ ನಿರತವಾಗುವ ದೃಶ್ಯಗಳಲ್ಲಿ ನಾಯಕಿ ಭಕ್ತಿಯ ಪಾತ್ರದಲ್ಲಿ ವರ್ಷಿಕಾ ಭಾವಪೂರ್ಣ ಅಭಿನಯದಲ್ಲಿ ತೊಡಗಿದ್ದರು.
೪೦- ೪೫ ಮಂದಿಯ ಪೂರ್ಣ ಪ್ರಮಾಣದ ತಂಡ ನಿರ್ದೇಶಕ ಆದರ್ಶ ಹೆಗಡೆ ಸಹಿತ ಅನುಭವಿ ತಂತ್ರೀಕರಣ ನಿರತವಾಗಿದೆ. ಮೊದಲ ನಿರ್ದೇಶನದ ನಾಟಕಕ್ಕೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಸುರೇಂದ್ರ ಮೋಹನ್ ಮುದ್ರಾಡಿ ಅವರು ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಾಟಕಕಾರ ಕಿರುಚಿತ್ರಗಳ ಕನಸುಗಾರ ವಿ.ಆರ್.ಸತೀಶ ಆಚಾರ್ಯ ಜೊತೆಗಿದ್ದರು.
ಬೈಲೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯರು ಪೂರಕ ಪಾತ್ರಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದ್ದರು.
ಶ್ರವಣ ಬೆಳಗೊಳದಲ್ಲಿ ಮಸ್ತಕಾಭಿಷೇಕದ ಸಮಾರೋಪದ ಕ್ಷಣಗಳನ್ನು ಮುಗಿಸಿ ಅಪಾರ ಸಂಖ್ಯೆಯಲ್ಲಿಆಗಮಿಸುತ್ತಿರುವ ಜೈನ ಯಾತ್ರಾರ್ಥಿಗಳು ಕನ್ನಡದ ಧಾರಾವಾಹಿಯ ಚಿತ್ರೀಕರಣ ವೀಕ್ಷಿಸಿ ಸಂಭ್ರಮಿಸಿ ಸೆಲ್ಪಿ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.ತಂಡವು ಕನ್ನಡ ಸಾಹಿತ್ಯ ಪರಿಷತ್ತಿನ ಅಜೆಕಾರು ಹೋಬಳಿ ಘಟಕದ ಅಧ್ಯಕ್ಷ ಶೇಖರ ಅಜೆಕಾರು ಅವರ ಆಹ್ವಾನದ ಮೇರೆಗೆ ಎಣ್ಣೆಹೊಳೆ ಸಾರ್ವಜನಿಕ ಗಣೇಶೋತ್ಸವಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿತು.

By Suddi9

Leave a Reply

Your email address will not be published. Required fields are marked *