ಮೂಡುಬಿದಿರೆ: “ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಕಾವ್ಯವು ಮಾಡುತ್ತದೆ. ಇದಕ್ಕೆ ಪೂರಕವಾಗಿ ಮೂಡಿ ಬಂದಿರುವ ಕಾವ್ಯವೇ ಕೇಶವ್ ಭಟ್ರು ರಚಿಸಿದ “ಮಂದಾರ ರಾಮಾಯಣ”. ಈ ಕಾವ್ಯ ವನ್ನು ವಿಮರ್ಶಾತ್ಮಕ ಚಿಂತನೆಗೆ ಒಳಪಡಿಸದೆ, ಇದರ ನಿಜವಾದ ತಿರುಳಾದ ಧರ್ಮಾರ್ಥಕಾಮ ಮೋಕ್ಷಗಳನ್ನು ಅರಿಯಬೇಕೆಂದು ಮೂಡಬಿದಿರೆ ಜೈನ ಮಠದ ಸ್ವಾಮೀಜಿ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ತಿಳಿಸಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರವು ಆಯೋಜಿಸಿದ `ಮಂದಾರ ಮಂಥನ’ ತುಳು ಮಂದಾರ ರಾಮಾಯಣ ಕಾವ್ಯಾವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಪ್ರಗತಿ ಹೊಂದಿದ ಭಾಷೆಯಾಗಿದ್ದು, ವಿಜಯನಗರ ಅರಸರ ಕಾಲದಲ್ಲೂ ಈ ಭಾಷೆ ಬಳಕೆಯಲ್ಲಿತ್ತು. ಸತ್ಯವಂತರು ಮತ್ತು ವಿದ್ಯಾವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡವು ವೈವಿಧ್ಯಮಯ ಸಂಸ್ಕøತಿ, ಪಕೃತಿ ಸೌಂದರ್ಯ, ಸ್ವಾಭಿಮಾನ ಜೀವನ ಶೈಲಿಯನ್ನು ಹೊಂದಿದೆ. ಮಂದಾರ ರಾಮಾಯಣದಲ್ಲಿ ತುಳುನಾಡಿನ ವೈಭವ, ರಾಮನ ಆದರ್ಶಗಳನ್ನು ಉಲ್ಲೇಖಿಸಲಾಗಿದೆ. ಕಾವ್ಯಗಳನ್ನು ಓದುವುದರಿಂದ ದೈವೀ ಶಕ್ತಿ ಮತ್ತು ಅಸುರ ಶಕ್ತಿಗಳ ನಡುವಿನ ವ್ಯತ್ಯಾಸವನ್ನು ತಿಳಿಯಬಹುದು ಹಾಗೂ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಕಾವ್ಯವು ಅಗಾಧ ಪಾತ್ರವಹಿಸುತ್ತದೆ. ಕೆಲವೊಂದು ಕಾವ್ಯಗಳು ಓದುಗರಿಗೆ ರಸದೌತಣ ನೀಡಿದರೆ ಇನ್ನೂ ಕೆಲವೊಂದು ನಮ್ಮಲಿರುವ ದ್ವಂದ್ವಗಳನ್ನು ಹೊರಹಾಕಿ ಸಾತ್ವಿಕತೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನಾ ಮಾತನಾಡಿ, ತುಳು ಭಾಷೆಯು ಒಂದು ಆತ್ಮೀಯತೆಯನ್ನು ಬೆಸೆಯುವ ಭಾಷೆಯಾಗಿದ್ದು, ಈ ನೆಲೆದ ಸಂಸ್ಕøತಿಯ ಅನಾವರಣ ಮಾಡುತ್ತದೆ. ಮಂದಾರ ರಾಮಾಯಣದಲ್ಲಿ ಸಾಮಾನ್ಯ ತುಳು ಭಾಷೆಯನ್ನು ಬಳಸಲಾಗಿದ್ದು, ತುಳುನಾಡಿನ ಭೌಗೋಳಿಕ ಪರಿಚಯ, ತುಳು ಸಂಸ್ಕøತಿಯ ಅನಾವರಣ, ಸ್ತ್ರೀ ಪರವಾದ ಚಿಂತನೆ, ಮಾಟಮಂತ್ರಗಳ ದುಷ್ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿಲಾಗಿದೆ. 1960ರಲ್ಲಿ ಮಂದಾರ ಕೇಶವ ಭಟ್ಟರು ತುಳು ಭಾಷೆಯಲ್ಲಿ ರಾಮಾಯಣವನ್ನು ರಚಿಸಲು ವಾಲ್ಮೀಕಿ ರಾಮಾಯಣದಿಂದ ಪ್ರೇರಣೆ ಪಡೆದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ನಾವು ಇಂದು ಭಾಷೆಗೆ ಮಾತೃ ಸ್ಥಾನವನ್ನು ನೀಡಿದ್ದರೂ, ಆ ಭಾಷೆಯೆ ಕ್ರಮೇಣ ಜನರ ಮನಸ್ಸಿನಿಂದ ದೂರವಾಗುತ್ತಿದೆ. ಈಗಿನ ಪೀಳಿಗೆಯು ಪಾಶ್ಚಾತ್ಯ ದೇಶದತ್ತ ಗಮನ ಹರಿಸಿದ್ದು, ಇನ್ನು ತುಳು ಭಾಷೆಗಿಂತ ಬೇರೆ ಭಾಷೆಯಲ್ಲಿ ಹೆಚ್ಚು ಚಿಂತಿಸುತ್ತಿದ್ದಾರೆ, ಅದಲ್ಲದೇ ಈ ಭಾಷೆಯಲ್ಲಿನ ಸಾಹಿತ್ಯಾಸಕ್ತಿಯು ಕಡಿಮೆಯಾಗಿದೆ. ಅದಕ್ಕಾಗಿ ನಾವು ತುಳು ಭಾಷೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಂದಾರ ತುಳು ರಾಮಾಯಣವನ್ನು ತೋನ್ಸೆ ಪುಷ್ಕಳ್ ಕುಮಾರ್ ವಾಚಿಸಿ, ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಡಾ| ಯೋಗೀಶ್ ಕೈರೋಡಿ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಜ್ಞಾ ವಂದಿಸಿ, ವಿಕ್ಷೀತಾ ಶೆಟ್ಟಿ ನಿರೂಪಿಸಿದರು.
