ಉಡುಪಿ: ಕವಿ ಕುಮಾರವ್ಯಾಸನು ಮಾತನಾಡುವುದೇ ರೂಪಕದಲ್ಲಿ ಅನ್ನುವ ಮಾತಿದ್ದು ಆತನ ಪ್ರತಿಯೊಂದು ಪದ್ಯವನ್ನು ಓದುವಾಗಲೂ ನಾವು ರೂಪಕಗಳನ್ನು ನೋಡಬಹುದಾಗಿದೆ. ಇದರಿಂದಾಗಿಯೇ ಕುಮಾರವ್ಯಾಸನಿಗೆ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದು ಪ್ರಾಪ್ತವಾಗಿದೆ ಎಂಬುದಾಗಿ ವಿದ್ವಾಂಸ ಹಾಗೂ ಹರಿದಾಸರೂ ಆಗಿರುವ ಮ.ನಾ.ಹೆಬ್ಬಾರ್ ಹೇಳಿದರು.
ಇವರು ಕಾಂತಾವರ ಕನ್ನಡ ಸಂಘ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು “ರೂಪಕ ಪ್ರಪಂಚ” ಎಂಬ ಕುರಿತು ಉಪನ್ಯಾಸ ನೀಡಿದರು.
ಸಮಾಜದಲ್ಲಿನ ಸ್ತ್ರೀ ಪುರುಷರು ತಾವು ಇತರರ ಎದುರು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶದಿಂದ ಉಡುಗೆ ತೊಡುಗೆ, ಅಲಂಕಾರಗಳನ್ನು ಮಾಡಿಕೊಳ್ಳುವಂತೆ ಕಾವ್ಯಗಳು ಕೂಡಾ ಓದುಗರಿಗೆ ಆಕರ್ಷಕವಾಗಿರಬೇಕಾದರೆ ಅದು ಕೂಡಾ ನಾನಾ ವಿಧದ ಅಲಂಕಾರಗಳನ್ನು ಹೊಂದಿರಬೇಕಾಗುತ್ತದೆ. ಮೀಮಾಂಸಕÀರು ಹೇಳುವಂತೆ ಕಾವ್ಯಗಳಲ್ಲಿ ಓದುಗರ ಗಮನವನ್ನು ಸೆಳೆಯಲು ಮತ್ತು ಕಾವ್ಯವು ಅತ್ಯಂತ ಸತ್ವಪೂರ್ಣವಾಗಿ ಆಕರ್ಷಕವಾಗಿರಲು ಅಲ್ಲಲ್ಲಿ ಉಪಯೋಗಿಸುವ “ಕಾವ್ಯ ಸೌಂದರ್ಯ”ವನ್ನೇ ‘ಅಲಂಕಾರ’ ಎನ್ನಲಾಗುತ್ತದೆ. ಇಂತಹ ಅಲಂಕಾರಗಳಲ್ಲಿ ಉಪಮೆ, ರೂಪಕ, ಅರ್ಥಾಂತರನ್ಯಾಸ, ದೃಷ್ಟಾಂತ, ಉತ್ಪ್ರೇಕ್ಷೆ, ಅತಿಶಯೋಕ್ತಿ ಹೀಗೆ ಹಲವು ಪ್ರಕಾರಗಳಿದ್ದು ಕುಮಾರವ್ಯಾಸನು ಇವುಗಳೆಲ್ಲವನ್ನೂ ಬಳಸಿಕೊಂಡಿದ್ದರೂ ರೂಪಕಗಳನ್ನು ಅತ್ಯಂತ ಹೆಚ್ಚಾಗಿ ಬಳಸಿಕೊಂಡ ಕವಿಯಾಗಿದ್ದಾನೆ ಅನ್ನುತ್ತಾ ಅನೇಕ ಉದಾಹರಣೆಗಳೊಂದಿಗೆ ಅದನ್ನು ಪ್ರಸ್ತುತಪಡಿಸಿದರು.
ಉಪನ್ಯಾಸಕ್ಕೆ ಮುನ್ನ ಹಿರಿಯ ಗಮಕಿ ಹಾಗೂ ಸಂಗೀತಗಾರರಾದ ಗಣಪತಿ ಪದ್ಯಾಣರವರು ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳ ಗಮಕ ವಾಚನ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಡಾ.ನಾ.ಮೊಗಸಾಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಬು ಶೆಟ್ಟಿ ನಾರಾವಿ ನಿರ್ವಹಿಸಿದರು. ನಿರಂಜನ ಮೊಗಸಾಲೆ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.


