ಮೂಡುಬಿದಿರೆ: ಕರಾಟೆಗೆ ಜಾಗತಿಕವಾಗಿ ಮನ್ನಣೆ ಸಿಗುತ್ತಿದ್ದು 2020ರಲ್ಲಿ ನಡೆಯುವ ಒಲಂಪಿಕ್ ಕ್ರೀಡೆಯಲ್ಲಿ ಕರಾಟೆಗೆ ಸ್ಥಾನ ಲಭಿಸಲಿದೆ. ಏಷ್ಯನ್ ಗೇಮ್ಸ್ನಲ್ಲಿ ದೇಶದಿಂದ ನಾಲ್ಕು ಸ್ಪರ್ಧಿಗಳು ಸ್ಪರ್ಧಿಸಿದ್ದು ಈ ಕ್ರೀಡೆಗೆ ಉತ್ತಮ ಭವಿಷ್ಯವಿದೆ ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಹೇಳಿದರು.
ಶೊರಿನ್ ರಿಯೂ ಕರಾಟೆ ಎಸೋಸಿಯೇಶನ್ ಮತ್ತು ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಗಂಜಿಮಠ ವಂಡೇಲಾ ಹಾಲ್ನಲ್ಲಿ ನಡೆದ 16ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಿಯುಸಿ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸರ್ಕಾರಿ ಹೆಣ್ಮಕ್ಕಳಿಗೆ ಮೂರು ತಿಂಗಳ ಆತ್ಮರಕ್ಷಣಾ ಕಲೆಯಾದ ಕರಾಟೆಯ ತರಬೇತಿಯನ್ನು ನೀಡುತ್ತಿದ್ದು ಸರ್ಕಾರ ಪ್ರೋತ್ಸಾಹಧನವನ್ನು ನೀಡುತ್ತಿದೆ ಎಂದರು.
ಕರಾಟೆ ಚಾಂಪಿಯನ್ ಶಿಪ್ನ್ನು ಉದ್ಘಾಟಿಸಿದ ಉದ್ಯಮಿ ಸಿ. ಎಚ್. ಅಬ್ದುಲ್ ಗಫೂರ್ ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಇದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿ ಎಂದು ಹೇಳಿದರು.
ಉದ್ಯಮಿ ಅಬುಲ್ ಆಲಾ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಪ್ರೆಸ್ಕ್ಲಬ್ ಮಾಜಿ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಸ್ ಬೆಳ್ಮಣ್, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಸಾಲ್ಯಾನ್, ಶಿವಮೊಗ್ಗ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಕಾಂತ ಭಟ್, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಕಾರ್ಯದರ್ಶಿ ರೋಹಿತಾಕ್ಷ, ನೀರುಮಾರ್ಗ ರೆಡ್ ಕಾರ್ಮೆಲ್ ಇಸ್ಲಾಮಿಕ್ ಸ್ಕೂಲ್ನ ಚೆಯರ್ಮೆನ್ ಎಂ. ಮಹಮ್ಮದ್ ನವಾಜ್, ವಂಡೇಲಾ ಹಾಲ್ನ ಅಹ್ಮದ್ ಸಾಹೇಬ್ ಭಾಗವಹಿಸಿದರು.
ಶೊರಿನ್ ರಿಯೂ ಕರಾಟೆ ಅಸೋಸಿಯೇಶನ್ನ ಮುಖ್ಯ ಶಿಕ್ಷಕ ನದೀಂ, ಸ್ಪರ್ಧೆಯ ಸಂಘಟನಾ ಕಾರ್ಯದರ್ಶಿಗಳಿಂದ ಸರ್ಫರಾಜ್, ರಹಿಮಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಂ. ಕೆ ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಧನಂಜಯ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ನವೀನ್ ಅಂಬೂರಿ ನಿರೂಪಿಸಿ ವಂದಿಸಿದರು.
ಸ್ಪರ್ಧೆಯಲ್ಲಿ ಸುಮಾರು 800ಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸಿದರು.

