ಕುಪ್ಪೆಪದವು: ಮೈಮೇಲೆ ಹಾಯುವಂತೆ ಚಲಿಸಿದ ವಾಹನವನ್ನು ತಡೆಗಟ್ಟಿ ಪರಿಶೀಲಿಸಿದಾಗ ಅದರಲ್ಲಿ ಗೋಸಾಗಾಟ ನಡೆಸುತ್ತಿರುವುದು ಕಂಡುಬಂದಿದ್ದು, ಈ ವಾಹನವನ್ನು ಬಜಪೆ ಪೊಲೀಸ್ಗೊಪ್ಪಿಸಿದ ಘಟನೆ ಕುಕ್ಕಟ್ಟೆ ಎಂಬಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನದ ವೇಳೆ ಪಿಕ್ಅಪ್ ವಾಹನವೊಂದು ವೇಗವಾಗಿ ಬಂದಿದ್ದು, ಅಲ್ಲಿ ನಿಂತಿದ್ದ ಯುವಕರ ಮೇಲೆ ಡಿಕ್ಕಿಹೊಡೆಯುವಂತೆ ವೇಗವಾಗಿ ಚಲಿಸಿತ್ತು. ಇದನ್ನು ಮೊಗರು ಎಂಬಲ್ಲಿ ತಡೆದು ಪರಿಶೀಲಿಸಿದಾಗ ಅದರಲ್ಲಿ ಹಸುವನ್ನು ಸಾಗಾಟ ನಡೆಸಿರುವುದು ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿದ್ದರು.
ವಾಹನ ಹಾಗೂ ಹಸುವನ್ನು ವಶಪಡಿಸಿದಾಗ ದನ ಮಾರಾಟ ಮಾಡಿದ ವ್ಯಕ್ತಿ ಠಾಣೆಗೆ ಆಗಮಿಸಿ ಮನೆಯಲ್ಲಿ ಸಾಕಲು ಕಷ್ಟವಾಗುವುದಕ್ಕೆ ಮಾರಿದ್ದಾಗಿ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಹಿಂದೂ ಸಂಘಟನೆಯ ಮುಖಂಡ ಜಗದೀಶ್ ಶೇಣವ ಅವರು ಈ ದನವನ್ನು ಗೋಶಾಲೆಗೆ ಒಪ್ಪಿಸುವಂತೆ ಕೇಳಿದ್ದರು. ಆಗ ದನ ಮಾರಾಟಗಾರ ಈ ಹಸುವನ್ನು ತಾನೇ ವಾಪಸ್ ಪಡೆದು ಹಣವನ್ನು ಅವರಿಗೆ ನೀಡುವುದಾಗಿ ಪೊಲೀಸ್ ಸಮ್ಮುಖದಲ್ಲಿ ತಿಳಿಸಿದ್ದು, ಹಸುವನ್ನು ತಾನೇ ಕರೆದುಕೊಂಡು ಹೋಗಿದ್ದಾರೆ. ಹಸು ಸಾಗಾಟಗಾರರಿಗೆ ಈ ರೀತಿ ಸಾಗಾಟ ನಡೆಸದಂತೆ ಎಚ್ಚರಿಕೆ ನೀಡಿ ಕಳಿಸಲಾಗಿದೆ. ಹಸು ಸಾಗಾಟ ನಡೆಸಲು ಕೆಲವೊಂದು ನೀತಿ ನಿಯಮಗಳಿದ್ದು ಅವುಗಳನ್ನು ಉಲ್ಲಂಘಿಸಲಾಗಿತ್ತು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
