ಬಂಟ್ವಾಳ: ಬಂಟ್ವಾಳ ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ಮತ್ತು ಪುತ್ತೂರು ನವಜೀವನ ಸ್ನೇಹ ಸಂಗಮ ವತಿಯಿಂದ ಸೆ.8 ಮತ್ತು 9ರಂದು ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿರುವ ‘ಅಕಾಲ ಹಲಸು ಸಂಗಮ-2018’ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿ.ಸಿ.ರೋಡು ಪ್ರೆಸ್‍ಕ್ಲಬ್ಬಿನಲ್ಲಿ ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಬುಧವಾರ ಬಿಡುಗಡೆಗೊಳಿಸಿದರು.

29btl-Halasu

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿದತ್ತವಾಗಿ ಸಿಗುವ ಆರೋಗ್ಯದಾಯಕ ಹಲಸಿನ ಹಣ್ಣು ಮತ್ತು ಹಲಸಿನ ಮರವು ಕಲ್ಪವೃಕ್ಷದಂತೆ ಎಲ್ಲವನ್ನೂ ನಮಗೆ ಉಪಯೋಗಕ್ಕೆ ನೀಡುತ್ತಿದೆ. ಈ ಹಿಂದೆ ಬಡಜನರ ಆಹಾರ ವಸ್ತುವಾಗಿದ್ದ ಹಲಸು ಆಧುನಿಕತೆಗೆ ತಕ್ಕಂತೆ ಮೌಲ್ಯವರ್ಧನೆಗೊಂಡು ವಿಭಿನ್ನ ರೀತಿಯ ಆಹಾರ ವಸ್ತುವಾಗಿ ಮಾರ್ಪಾಡುಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಸ್ವಾಗತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಎರಡು ದಿನಗಳಲ್ಲಿ ನಡೆಯುವ ಹಲಸು ಸಂಗಮ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಹಲಸಿನ ಖಾದ್ಯ, ಪ್ರಾತ್ಯಕ್ಷಿಕೆ, ಗೋಷ್ಠಿ, ಕೃಷಿ ಪ್ರದರ್ಶನ ಮತ್ತು ಮಾರಾಟ ಜೊತೆಗೆ ಯಕ್ಷಗಾನ ತಾಳಮದ್ದಲೆ ಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನವಚೇತನ ಸ್ನೇಹ ಸಂಗಮ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಮಾತನಾಡಿ, ಸಂಪನ್ಮೂಲ ವ್ಯಕ್ತಿ ಶ್ರೀಪಡ್ರೆ ಅವರ ಮಾರ್ಗದರ್ಶನದಂತೆ ಹಲಸಿವ ವೈವಿಧ್ಯಮಯ ಕೃಷಿ ಪದ್ಧತಿ ಮತ್ತು ಹಲಸಿನ ಮೌಲ್ಯವರ್ಧನೆ ಬಗ್ಗೆ ಗೋಷ್ಠಿ ನಡೆಯಲಿದೆ. ಹಲಸಿನ ಬಿರಿಯಾನಿ, ಕಬಾಬ್, ಹಲ್ವ, ಚಿಪ್ಸ್, ಐಸ್‍ಕ್ರೀಂ, ಪಾಯಸ, ಹಪ್ಪಳ, ಸೆಂಡಿಗೆ, ಪೇಡಾ ಮತ್ತಿತರ ಬಗೆಯ ತಿಂಡಿ ತಿನಿಸು ಪ್ರದರ್ಶನ ಮತ್ತು ಮಾರಾಟ ಜೊತೆಗೆ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.
ಅಂದು ಸುಮಾರು 60ಕ್ಕೂ ಮಿಕ್ಕಿ ವಿವಿಧ ಮಳಿಗೆ ತೆರೆಯಲಾಗುತ್ತದೆ. ಈ ಹಿಂದೆ ಪುತ್ತೂರಿನಲ್ಲಿ ನಡೆದ ಹಲಸು ಸಂಗಮ ಕಾರ್ಯಕ್ರಮ ಯಶಸ್ವಿಯಾಗಿದ್ದು, ಕೇರಳ ಮಾದರಿಯಲ್ಲಿ ರಾಜ್ಯದ ಕೃಷಿಕರಲ್ಲಿ ಕೂಡಾ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಮಿತಿ ಅಧ್ಯಕ್ಷ ಜಿ.ಆನಂದ ಬಂಟ್ವಾಳ್, ಪ್ರಗತಿಪರ ಕೃಷಿಕ ಕೈಯೂರು ನಾರಾಯಣ ಭಟ್, ಪದಾಧಿಕಾರಿಗಳಾದ ಮಹಾಬಲೇಶ್ವರ ಹೆಬ್ಬಾರ್, ಮಧುಸೂದನ ಶೆಣೈ, ಸುಜಯ ಪಾಣೆಮಂಗಳೂರು, ರಾಜಾ ಬಂಟ್ವಾಳ್, ಗೋಪಾಲ ಅಂಚನ್, ಮೋಹನ್ ಕೆ.ಶ್ರೀಯಾನ್ ರಾಯಿ, ಗಣೇಶ ಎನ್. ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ, ಪತ್ರಕರ್ತ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪಾಂಡುರಂಗ ಭಟ್ ಕುದಿಂಗಿಲ ವಂದಿಸಿದರು.

By Suddi9

Leave a Reply

Your email address will not be published. Required fields are marked *