ಕುಪ್ಪೆಪದವು: ಮಹಿಳೆಯೋರ್ವರು ಬೀಡಿ ಕೊಂಡುಹೋಗುತ್ತಿದ್ದಾಗ ದಾರಿ ಕೇಳುವ ನೆಪದಲ್ಲಿ ಆಗಮಿಸಿದ ಮುಸುಕುಧಾರಿಗಳಿರಿಬ್ಬರು ಮಹಿಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಒಡವೆ ದೋಚಲು ವಿಫಲ ಯತ್ನ ನಡೆಸಿ ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನದ ವೇಳೆ ಗಂಜಿಮಠ ಸಮೀಪದ ಮೊಗರು ಗ್ರಾಮದ ಕಿಲಾಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಲೀಲಾವತಿ(40) ಎಂಬವರು ಬೀಡಿ ಕೊಂಡೊಯ್ಯಲೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಬೈಕ್ನಲ್ಲಿ ಆಗಮಿಸಿದ ಆಗಂತುಕರಿಬ್ಬರು ಬೈಕ್ ನಿಲ್ಲಿಸಿ, ಲೀಲಾವತಿಯವರನ್ನು ನಿಲ್ಲಿಸಿ ಮೂಡಬಿದ್ರೆಗೆ ಹೋಗುವ ದಾರಿ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅಷ್ಟಾಗುತ್ತಿದ್ದಂತೆ ಒಬ್ಬಾತ ಮೆಣಸಿನ ಹುಡಿ ಎರಚಿ ಚಿನ್ನದ ಸರವನ್ನು ಎಳೆಯಲು ಮುಂದಾಗಿದ್ದಾನೆ. ತಕ್ಷಣ ಲೀಲಾವತಿ ಅವರು ಬೊಬ್ಬೆ ಹೊಡೆದು ಪೊದೆಯೊಂದಕ್ಕೆ ಹಾರಿ ನೇರವಾಗಿ ಗದ್ದೆಗೆ ಬಿದ್ದಿದ್ದಾರೆ. ಗಲಿಬಿಲಿಗೊಂಡ ಆಗಂತುಕರು ತಾರೆಮಾರ್ನತ್ತ ಪರಾರಿಯಾಗಿದ್ದಾರೆ.
ಬೈಕ್ನಲ್ಲಿದ್ದ ಆಗಂತುಕರ ಪೈಕಿ ಒಬ್ಬಾತ ಹೆಲ್ಮೆಟ್ ಧರಿಸಿದ್ದರೆ ಮತ್ತೊಬ್ಬ ಮುಸುಕು ಹಾಕಿಕೊಂಡಿದ್ದ. ಮೂಲರಪಟ್ಣ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿರುವುದರಿಂದ ಕುಕ್ಕಟ್ಟೆ ಮುಖಾಂತರ ಕುಪ್ಪೆಪದವಿನಿಂದ ಪರಾರಿಯಾಗಿರುವ ಬಗ್ಗೆ ಶಂಖೆ ಇದೆ. ಕುಕ್ಕಟ್ಟೆಯ ಮಾರಿಗುಡಿ ಹಾಗೂ ಕುಪ್ಪೆಪದವು ಸಮೀಪದ ಪೆಟ್ರೋಲ್ ಬಂಕ್ ಬಳಿ ಸಿಸಿ ಕೆಮರಾ ಅಳವಡಿಸಲಾಗಿದ್ದು, ಇದನ್ನು ಪರಿಶೀಲಿಸಿದರೆ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬಜಪೆ ಇನ್ಸ್ಪೆಕ್ಟರ್ ಪರಿಶಿವ ಮೂರ್ತಿ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಮಹಿಳೆಯ ಕಣ್ಣು ಕೆಂಪಾಗಿದ್ದು, ಕೈಗೆ ಸ್ವಲ್ಪ ಗಾಯವಾಗಿದೆ. ಸ್ಥಳೀಯ ಪಂಚಾಯತ್ ಸದಸ್ಯರಾದ ಜಯಾನಂದ ಕುಲಾಲ್ ಹಾಗೂ ಸಂದೀಪ್ ಶೆಟ್ಟಿ ಸೇರಿ ಹಲವರು ಮಹಿಳೆಗೆ ಧೈರ್ಯ ತುಂಬಿದ್ದಾರೆ.
