ಕೈಕಂಬ: ನಮ್ಮ ಶಾಲೆಯಲ್ಲಿ ಒಟ್ಟು 83 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕಿ ಸೇರಿ ಕೇವಲ ಒಟ್ಟು ಐದು ಮಂದಿ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆಯಿದ್ದು, ಹೆಚ್ಚುವರಿ ಎಂಬ ಕಾರಣಕ್ಕೆ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸಬೇಕು ಇಲ್ಲವಾದರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಸ.ಹಿ. ಪ್ರಾಥಮಿಕ ಶಾಲೆ ಕಲ್ಲಾಡಿ ಇಲ್ಲಿನ ಮಕ್ಕಳ ಪೋಷಕರು ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗಿನ ಮಕ್ಕಳಿಗೆ ಐದು ಮಂದಿ ಶಿಕ್ಷಕಿಯರು ಬೋಧನೆ ಮಾಡುತ್ತಿದ್ದು, ಇತರ ಕೆಲಸಗಳನ್ನೂ ನಿರ್ವಹಿಸಬೇಕಾಗಿದೆ.ಶಿಕ್ಷಣದ ಅಡಿಪಾಯ ಆಗುವುದೇ ಪ್ರಾಥಮಿಕ ಶಾಲೆಯಲ್ಲಿ, ಆದರೆ ಇಲ್ಲಿ ತರಗತಿಗೊಬ್ಬರು ಹಾಗೂ ವಿಷಯಕ್ಕೊಬ್ಬರು ಶಿಕ್ಷಕರನ್ನು ನೀಡದಿದ್ದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದು ಹೇಗೆ? ಈ ಶಾಲೆಯಲ್ಲಿ ಕೇವಲ ಐದು ಶಿಕ್ಷಕರಿದ್ದು, ಏಳು ತರಗತಿಗಳನ್ನು ನಡೆಸುವುದು ಕಷ್ಟವಾಗುತ್ತದೆ.
ಇಷ್ಟಿದ್ದರೂ ಒಬ್ಬರು ಶಿಕ್ಷಕರನ್ನು ವರ್ಗಾವಣೆಗೊಳಿಸಿದರೆ ನಾಲ್ಕು ಶಿಕ್ಷಕರು ಏನು ಮಾಡಲು ಸಾಧ್ಯ? ಇದು ಮಕ್ಕಳ ವಿದ್ಯಾಭ್ಯಾಸಕ್ಕೂ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಶಾಲೆಯ ಶಿಕ್ಷಕಿ ಹೆಚ್ಚುವರಿ ಎಂಬ ನಿರ್ಧಾರಕ್ಕೆ ಬಂದು ವರ್ಗಾವಣೆ ಮಾಡದೆ ಇಲ್ಲೇ ಉಳಿಸಬೇಕು. ಏಳು ದಿನಗಳ ಒಳಗಡೆ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕು ಇಲ್ಲವಾದಲ್ಲಿ ಮಕ್ಕಳ ಎಲ್ಲಾ ಪೋಷಕರು ಶಾಲೆಯ ಮುಂಭಾಗದಲ್ಲಿ ಸೇರಿ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಪೋಷಕರ ಮನವಿಯನ್ನು ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿಯವರು ಸ್ವೀಕರಿಸಿದ್ದು, ಇದನ್ನು ಜಿಲ್ಲಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಹಲವರಿಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಮಜೀದ್, ಉಪಾಧ್ಯಕ್ಷರಾದ ಅರುಣಾ ಭಾಸ್ಕರ ಶೆಟ್ಟಿ, ಗ್ರಾ.ಪಂ. ಸದಸ್ಯ ಅಬೂಬಕ್ಕರ್ ಕಲ್ಲಾಡಿ, ಭಾಸ್ಕರ ಶೆಟ್ಟಿ ಬಾರ್ದಿಲ ಮುಂತಾದವರು ಭಾಗವಹಿಸಿದ್ದರು.ಶಾಲಾ ಶಿಕ್ಷಕಿಯನ್ನು ವರ್ಗಾವಣೆಗೊಳಿಸದಂತೆ ತಾ.ಪಂ. ಸದಸ್ಯ ನಾಗೇಶ್ ಶೆಟ್ಟಿ ಮುಖಾಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
