ಮೂಡುಬಿದಿರೆ:ರಾತ್ರಿ ಕೆಲಸ ಮುಗಿಸಿ ಮನೆಗೆಂದು ತೆರಳಿದ್ದ ಇಲ್ಲಿನ ಬಟ್ಟೆ ಅಂಗಡಿ ಉದ್ಯೋಗಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ.

ಹೊಸಬೆಟ್ಟು ಗ್ರಾಮದ ರತ್ನಾಕರ ಕಡಂಬ ಅವರ ಮಗ ಸುದರ್ಶನ್ ಜೈನ್(28)ನಾಪತ್ತೆಯಾದ ವ್ಯಕ್ತಿ. ಪ್ರಭಾತ್ ಸಿಲ್ಕ್ಸ್ ಬಟ್ಟೆ ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಈತ ಎಂದಿನಂತೆ ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಕೆಲಸ ಮುಗಿಸಿ ತನ್ನ ತಮ್ಮನ ಬೈಕ್‍ನಲ್ಲಿ ಮನೆಗೆ ಹೊರಟಿದ್ದ. ಆದರೆ ಸುದರ್ಶನ್ ಮನೆಗೆ ಬಾರದೆ ನಿಗೂಢವಾಗಿ ಕಣ್ಮರೆಯಾಗಿದ್ದ.
ಈ ಬಗ್ಗೆ ಈತನ ತಮ್ಮ ಕೂಡ ಮನೆಯಲ್ಲಿ ಸರಿಯಾದ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ.
ಏತನ್ಮಧ್ಯೆ ಬಟ್ಟೆ ಅಂಗಡಿಯ ಪ್ರಭಾತ್‍ಚಂದ್ರ ತಮ್ಮ ಉದ್ಯೋಗಿ ಸುದರ್ಶನ್ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಸುದರ್ಶನನ್ನು ಬೈಕ್‍ನಲ್ಲಿ ಕರೆದುಕೊಂಡು ಹೋಗಿದ್ದ ಆತನ ತಮ್ಮನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಆ ದಿನ ರಾತ್ರಿ ಅಣ್ಣನನ್ನು ನಾನು ಬೈಕ್‍ನಲ್ಲಿ ಕರೆದುಕೊಂಡು ಹೋದದ್ದು ನಿಜ. ಆದರೆ ಮೆಸ್ಕಾಂ ಬಳಿ ನನ್ನ ಜತೆ ಜಗಳವಾಡಿ ಮನೆಗೆ ಬರುವುದಿಲ್ಲ ಎಂದು ಹೇಳಿ ಬೈಕ್‍ನಿಂದ ಇಳಿದು ಹೋಗಿದ್ದಾನೆ ಎಂದು ತಿಳಿಸಿದ್ದಾನೆನ್ನಲಾಗಿದೆ. ಸುದರ್ಶನ್ ಅವರ ಮೊಬೈಲ್ ಸ್ವಿಚ್‍ಡ್ ಆಫ್ ಸಂದೇಶ ಬರುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
