ಕೈಕಂಬ: ಭಾಷೆ ಮತ್ತು ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ. ತುಳುನಾಡಿನ ಸಂಸ್ಕøತಿ, ಭಾಷೆ ಅಪಾರ ವೈಶಿಷ್ಢ್ಯತೆಯಿಂದ ಕೂಡಿದೆ. ನಮ್ಮ ಹಿರಿಯ ಪಾರಂಪರಿಕ ಜೀವನ ಪದ್ಧತಿಯನ್ನು ನಾವು ಮತ್ತು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ಅಗತ್ಯ ಇಂದು ಹೆಚ್ಚಾಗಿದೆ. ಆಧುನಿಕ ಜೀವನದಲ್ಲಿ ನಮ್ಮ ಪರಂಪರೆಯನ್ನು ಮರೆಯುವ ಅಪಾಯವಿರುವುದರಿಂದ ಆಟಿದ ಕೂಟದಂಥಾ ಕಾರ್ಯಕ್ರಮಗಳ ಅಗತ್ಯವಿದೆ. ಹಿಂದಿನ ಆಟಿಯ ಕಷ್ಟವನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕು. ಬಂಟರು ಶಿಕ್ಷಣ ಪಡೆದು ಸದೃಢವಾಗುವುದರ ಜೊತೆಗೆ ಇತರರನ್ನು ಸದೃಢವಾಗಿಸಲು ಪಣತೊಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕುಪ್ಪೆಪದವಿನ ಕುಳವೂರು ಮತ್ತು ಕಿಲೆಂಜಾರು ಗ್ರಾಮದ ಬಂಟರ ಸಂಘದ ವತಿಯಿಂದ ಕುಳವೂರು ಗುಂಡ್ಯ ಜಾರಪ್ಪ ಆಳ್ವರ ಮನೆ ವಠಾರದಲ್ಲಿ ಭಾನುವಾರ ನಡೆದ 7ನೇ ವರ್ಷದ ಆಟಿ ಕೂಟೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಸಂಸದ ನಳಿನ್ ಕುಮಾರ್ ಅವರು ವಿಶಿಷ್ಠ ರೀತಿಯಲ್ಲಿಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ಶಾಸಕರಾದ ರಾಜೇಶ್ ನಾೈಕ್ ಉಳಿಪಾಡಿಗುತ್ತು ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಳಿನ್ ಪ್ರತಿಭಾ ಪುರಸ್ಕಾರ ವಿತರಿಸಿದರು.
ತಾಲೂಕು ಪಂಚಾತ್ ಸದಸ್ಯ ನಾಗೇಶ್ ಶೆಟ್ಟಿ, ವಿಶ್ರಾಂತ ದೈಹಿಕ ಶಿಕ್ಷಕ ಗೋಪಾಲ ಕೃಷ್ಣ ಎಸ್. ಕಲೆಂಜ, ಕ್ಯಾ. ಬ್ರಿಜೇಶ್ ಚೌಟ ತಲಪಾಡಿ, ಕಿಲೆಂಜಾರು ಬಂಟರ ಸಂಘದ ಗೌರವಾಧ್ಯಕ್ಷ ಸೋಮಶೇಖರ ಶೆಟ್ಟಿ, ಕುಳವೂರು ಬಂಟರ ಸಂಘದ ಅಧ್ಯಕ್ಷ ಕೋಚಣ್ಣ ಆಳ್ವ, ಚಂದ್ರಹಾಸ ಶೆಟ್ಟಿ ನಾರಳ, ಸದಾನಂದ ಶೆಟ್ಟಿ ಕುಳವೂರು, ಜಾರಪ್ಪ ಆಳ್ವ, ಗ್ರಾ.ಪಂ. ಸದಸ್ಯ ಪ್ರವೀಣ್ ಆಳ್ವ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷತೆ: ತಾರಾಯಿದ ಪೇರ್ದ ಸೇಮೆದಡ್ಯೆ, ಕನಿಲೆ ಪದೆಂಗಿ ಗಸಿ, ಬಲ್ಯಾರ್ ಕಡ್ಲೆ, ಮೂಡೆ, ಕುಡುತ ಸಾರ್, ಪೂಂಬೆ, ತಿಮೆರೆ ಚಟ್ನಿ, ಕೋರಿ ಸುಕ್ಕ ಮುಂತಾದ ತುಳು ಸಂಸ್ಕøತಿಯನ್ನು ಬಿಂಬಿಸುವ ವಿಶಿಷ್ಠ ತಿಂಡಿನಿಸುಗಳಿದ್ದವು. ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ತೆಂಗಿನ ಕಾಯಿ ಸುಲಿಯುವುದು, ತುಳು ರಸಪ್ರಶ್ನೆ ಮುಂತಾದ ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.
