ಎಡಪದವು: ಅಗರಿ ಶ್ರೀನಿವಾಸ ಭಾಗವತರಂತಹಾ ಮೇರು ವ್ಯಕ್ತಿತ್ವ ಹೊಂದಿರುವ ಭಾಗವತರ ಶಿಷ್ಯರೆನ್ನಲು ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ . ಯಾಕೆಂದರೆ ಅವರು ಹಾಗೆಯಲ್ಲಾ ಯಾರನ್ನೂ ಸುಲಭದಲ್ಲಿ ಶಿಷ್ಯರನ್ನಾಗಿ ಸ್ವೀಕರಿಸುವುದಿಲ್ಲ. ಅಂತಹುದರಲ್ಲಿ ನನ್ನನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಭಾಗವತಿಕೆಯನ್ನು ಕಲಿಸಿರುವುದು ನನ್ನ ಭಾಗ್ಯ ಎಂದು ನಿವೃತ್ತ ಶಿಕ್ಷಕ, ಯಕ್ಷಗಾನ ಭಾಗವತರಾದ ಜಿ. ಸುಬ್ರಾಯ ಭಟ್ ಹೇಳಿದರು.
ಅವರು ಶ್ರೀರಾಮಾಂಜನೇಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಳಲಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಯಕ್ಷಗಾನ ಸಪ್ತಾಹದ ಅಂಗವಾಗಿ ಪ್ರಾಥಮಿಕ ಶಾಲೆ ಮಳಲಿ ಇಲ್ಲಿನ ಸಭಾಂಗಣದಲ್ಲಿ ಭಾನುವಾರ ನಡೆದ ಅಗರಿ ಹಾಗೂ ಬಲಿಪ ಶೈಲಿಯ ಯಕ್ಷ-ಗಾನ-ವೈಭವ ಎನ್ನುವ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಂದಿನ ಶಿಕ್ಷಕರಾಗಿದ್ದ ಎನ್. ಕೃಷ್ಣರಾವ್ ಅವರ ಮಾತಿನಂತೆ ಅಗರಿಯವರಲ್ಲಿ ಯಕ್ಷಗಾನ ಕಲಿಸುವಂತೆ ಕೇಳಿಕೊಂಡೆ. ಅವರು ನನ್ನಲ್ಲಿ ಒಂದೆರಡು ಪದ್ಯಗಳನ್ನು ಹಾಡುವಂತೆ ಕೇಳಿಕೊಂಡರು. ಈ ಮುಂಚೆ ಯಕ್ಷಗಾನದಲ್ಲಿ ಅವರ ಭಾಗವತಿಯನ್ನು ಕೇಳಿ ಕಂಠಪಾಠ ಮಾಡಿದ್ದ ನಾನು ಅವರ ಮುಂದೆ ಅದನ್ನೇ ಹಾಡಿದೆ. ಇದರಿಂದ ಪುಳಕಿತರಾದ ಅವರು ನನ್ನ ಪಂಚಾಂಗವನ್ನು ಗಮನಿಸಿ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ನೀನು ಯಕ್ಷಗಾನ ಬಯಲಾಟದಲ್ಲಿ ಹಾಡುವುದು ಬೇಡ, ತಾಳಮದ್ದಳೆಯಂತಹಾ ಕಾರ್ಯಕ್ರಮದಲ್ಲಿ ಹಾಡು, ಯಕ್ಷಗಾನ ಆಸಕ್ತರಿಗೆ ಭಾಗವತಿಕೆ ಕಲಿಸು ಎಂದು ನನಗೆ ಅಂದು ನೀಡಿದ ಮಾತಿನಂತೆ ಇಂದು ಕೂಡಾ ನಡೆದುಕೊಂಡು ಬರುತ್ತಿದ್ದೇನೆ. ನನ್ನ ಪ್ರಕಾರ ಅಗರಿ ಹಾಗೂ ಬಲಿಪರ ಶೈಲಿಯ ಮುಂದೆ ಯಾವ ಶೈಲಿಯೂ ಇಲ್ಲ ಎಂದು ಜಿ. ಸುಬ್ರಾಯ ಭಟ್ ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಪತಿ ಆಚಾರ್ಯ ನಾರಳ ಮಾತನಾಡಿ, ಇಂದಿನ ಮಕ್ಕಳನ್ನು ಯಕ್ಷಗಾನ ಪ್ರೇಮಿಗಳನ್ನಾಗಿಸಿ ಅವರಿಗೂ ತರಬೇತಿ ನೀಡಿ, ಯಕ್ಷಗಾನ ಕಲಾವಿದರನ್ನಾಗಿ ರೂಪಿಸಬೇಕು ಎಂದು ತಿಳಿಸಿದರು. ತಾಲೂಕು ಪಂಚಾಯತ್ ಸದಸ್ಯ ಸುನಿಲ್ ಕುಮಾರ್ ಮಾತಾಡಿ, ನನ್ನ ಹಿರಿಯರ ಕಾಲದಿಂದಲೂ ರಾಮಾಂಜನೇಯ ಯಕ್ಷಗಾನ ಮಂಡಳಿ ಯಕ್ಷಗಾನವನ್ನು ಕಲಿಸಿ ಉಳಿಸಿಕೊಂಡು ಬರುತ್ತಿದೆ. ಈ ಕೆಲಸ ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.

0508malali5
ಯಕ್ಷಗಾನವನ್ನು ಉಳಿಸಿ ಬೆಳೆಸಲೆಂದು ಯಕ್ಷಗಾನ ಸಪ್ತಾಹ ಎನ್ನುವ ಕಾರ್ಯಕ್ರಮದ ಮೂಲಕ ಪ್ರೋತ್ಸಾಹ ನೀಡಿಕೊಂಡು ಬರಲಾಗುತ್ತಿದೆ. ನನ್ನ ತಂದೆಯೂ ಇದಕ್ಕೆ ಪ್ರೋತ್ಸಾಹಿಸಿದ್ದರು. ಇಂದು ಆ ಭಾಗ್ಯ ನನಗೂ ಲಭಿಸಿರುವುದು ನನ್ನ ಸೌಭಾಗ್ಯ. ಇಲ್ಲಿನ ಮಕ್ಕಳಿಗೂ ಯಕ್ಷಗಾನವನ್ನು ಕಲಿಸುವ ಮೂಲಕ ಕಲೆಯನ್ನು ಉಳಿಸಿಕೊಳ್ಳೋಣ ಎಂದು ಯುವ ಮುಖಂಡ, ಅಸರ್ ಕಂಪನಿಯ ಮಾಲಕ ಚಂದ್ರಹಾಸ ಶೆಟ್ಟಿ ನಾರಳ ನುಡಿದರು. ಉಳಿಪಾಡಿಗುತ್ತು ಉದಯಕುಮಾರ್ ಆಳ್ವ ಮಾತನಾಡಿದರು.
ಪಂಚಾಯತ್ ಸದಸ್ಯ ಬೂಬಪೂಜಾರಿ, ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶೇಖರ್ ಪೂಜಾರಿ, ಶ್ರೀರಾಮ್ ಮೋಟಾರ್ಸ್ ಮಾಲಕ ಜನಾರ್ದನ ಸಪಳಿಗ, ಮಾಜಿ ಪಂ. ಅಧ್ಯಕ್ಷರಾದ ಜಯಾನಂದ ನಾಯಕ್ ಉಪಸ್ಥಿತರಿದ್ದರು. ಶ್ರೀಪತಿ ಆಚಾರ್ಯ ಪ್ರಾರ್ಥಿಸಿದರು. ಹಾಸ್ಯ ಕಲಾವಿದ ಉಮೇಶ್ ಸ್ವಾಗತಿಸಿ, ನಿರೂಪಿಸಿದರು. ಯಕ್ಷಾಗನ ಕಲಾವಿದರನ್ನು ಸನ್ಮಾನಿಸಲಾಯಿತು. ಆ.8ರಂದು ಇಂದ್ರಜಿತ್ ಕಾಳಗ ತಾಳಮದ್ದಳೆ ನಡೆಯಲಿದೆ.

ಯಕ್ಷಗಾನ ಭಾಗವತರಾದ ಜಿ. ಸುಬ್ರಾಯ ಭಟ್ ಅವರನ್ನು ಸನ್ಮಾನಿಸಲಾಯಿತು

By suddi9

Leave a Reply

Your email address will not be published. Required fields are marked *