ದಸರಾ ಉದ್ಘಾಟನೆಗೆ ಗಿರೀಶ್ ಕಾರ್ನಾಡ್ ಬೇಡ: ಹಿಂದೂ ಜನಜಾಗೃತಿ ಸಮಿತಿ
ಮಂಗಳೂರು: ದಸರಾ ಇದು ನಾಡು ಹಬ್ಬ. ಈ ಹಬ್ಬಕ್ಕೆ ಧರ್ಮದಲ್ಲಿ ಶ್ರದ್ಧೆಯುಳ್ಳವರು ಚಾಮುಂಡೇಶ್ವರಿಯ ದರ್ಶನಕ್ಕೆಂದು ಬರುತ್ತಾರೆ. ಇಂತಹ ಧಾರ್ಮಿಕ ವಾತಾವರಣವಿರುವಾಗ ಆ ಹಬ್ಬಕ್ಕೆ ದೇವರನ್ನು ನಂಬದ ನಾಸ್ತಿಕರಾಗಿರುವ ಗಿರೀಶ್ ಕಾರ್ನಾಡರನ್ನು ಕರೆಸುವುದು ಸಮಸ್ತ ಹಿಂದೂಗಳ ಧಾಮರ್ಿಕ ಭಾವನೆಗೆ ನೋಯಿಸುವ ಕೃತ್ಯವಾಗಿದೆ ಎಂದು ಜನಜಾಗೃತಿ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದಸರಾ ಇದು ಹಿಂದೂಗಳ ಶ್ರದ್ಧಾಭಕ್ತಿಯ ಪ್ರತೀಕವಾಗಿದೆ. ಇದರೊಂದಿಗೆ ಜನರ ಧಾರ್ಮಿಕ ಭಾವನೆಯ ಅಡಗಿದೆ. ಭಕ್ತಿಭಾವದಿಂದ ಸೇರುವ ಈ ಉತ್ಸವದಲ್ಲಿ ತಾಯಿ ಚಾಮುಂಡಿಯನ್ನು ಪೂಜಿಸಲೆಂದು ನೆರೆದಿರುವ ಸಂದರ್ಭದಲ್ಲಿ ದೇವರನ್ನು ನಂಬದ ಓರ್ವ ನಾಸ್ತಿಕರನ್ನು ಇದರ ಉದ್ಘಾಟನೆಗಾಗಿ ಕರೆಯುವುದು ಹಿಂದೂಗಳ ಧಾಮರ್ಿಕ ಭಾವನೆಗೆ ನೋವು ತಂದಿದೆ. ಇದು ವೈದ್ಯಕೀಯ ಸಮಾರಂಭಕ್ಕೆ ವಕೀಲರನ್ನು ಕರೆದಂತೆ ಹಾಸ್ಯಾಸ್ಪದವಾಗಿದೆ. ಆಯಾ ಕ್ಷೇತ್ರದ ಸಭೆ ಸಮಾರಂಭಗಳಿಗೆ ಆಯಾ ಕ್ಷೇತ್ರದಲ್ಲಿ ನಂಬಿಕೆ ಉಳ್ಳವರು, ಪರಿಣಿತರನ್ನು ಕರೆಸಿದರೆ ಆ ಕ್ಷೇತ್ರಕ್ಕೆ ಕಳೆ ಬರುತ್ತದೆ. ಅದೇ ರೀತಿ ಧರ್ಮ, ಅಧ್ಯಾತ್ಮದ ಬಗ್ಗೆ ಯಾವುದೇ ಮಾಹಿತಿ ಇಲ್ಲದ, ಬದಲಾಗಿ ಅವುಗಳನ್ನು ವಿನಾಕಾರಣ ಟೀಕಿಸುವ ಹಾಗೂ ಹಿಂದೂಗಳ ಧಾರ್ಮಿಕ ವಿಧಿಗಳನ್ನು ಮೂಢನಂಬಿಕೆ ಎಂದು ಕರೆಯುವ ಸಾಹಿತಿ ಗಿರೀಶ ಕಾರ್ನಾಡರನ್ನು ದಸರಾ ಈ ಧಾಮರ್ಿಕ ಕಾರ್ಯಕ್ರಮದ ಉದ್ಘಾಟನೆಗೆ ಕರೆಯುವುದು ಎಷ್ಟು ಸಮಂಜಸ? ಹಾಗಾಗಿ ನಾವು ಸರಕಾರಕ್ಕೆ, ಈ ಸಮಾರಂಭದ ಉದ್ಘಾಟನೆಗೆ ಧಾರ್ಮಿಕ ಕ್ಷೇತ್ರದ ಸಂತರು, ಪಂಡಿತರನ್ನು ಕರೆದು ಅದರ ಪಾವಿತ್ರ್ಯ ಉಳಿಸಬೇಕೆಂದು ಸಮಸ್ತ ಹಿಂದೂಗಳ ಪರವಾಗಿ ವಿನಂತಿಸುತ್ತಿದ್ದೇವೆ. ಅಲ್ಲದೇ ಸರಕಾರ ಈ ಬಗ್ಗೆ ಪುನರಾವಲೋಕನ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
