ಬಂಟ್ವಾಳ: ಚುನಾವಣೆ ಕಳೆದು ಎರಡು ತಿಂಗಳಾದರೂ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮೇಲೆ ಆರೋಪ ಮತ್ತು ಅಪಪ್ರಚಾರ ನಡೆಸುವುದನ್ನು ನಿಲ್ಲಿಸಿಲ್ಲ. ಬಿಜೆಪಿಯಲ್ಲಿದ್ದರೂ ಗೊಂದಲದಲ್ಲೇ ಇದ್ದು ತನ್ನ ಅಸ್ಥಿತ್ವಕ್ಕಾಗಿ ಪರದಾಡುತ್ತಿರುವ ಇವರು ಯಾವುದಾದರೂ ದೊಡ್ಡ ಹುದ್ದೆ ದೊರೆಯಬಹುದೆಂಬ ದುರಾಸೆಯಿಂದ ರಮಾನಾಥ ರೈಯವರಂತಹ ದೊಡ್ಡ ವ್ಯಕ್ತಿತ್ವವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ತನ್ನ ಸ್ವಾರ್ಥ ಸಾಧನೆಗಾಗಿ ದೊಡ್ಡವರನ್ನು ನಿಂದಿಸುವ ಮೂಲಕ ಬಿಜೆಪಿ ನಾಯಕರನ್ನು ಓಲೈಸುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು ಆರೋಪಿಸಿದ್ದಾರೆ.

20180710_164245

ಬಿ.ಸಿ.ರೋಡಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹರಿಕೃಷ್ಣ ಬಂಟ್ವಾಳರ ಇತಿಹಾಸ ಏನೆಂಬುದು ಬಂಟ್ವಾಳದ ಜನತೆಗೆ ಗೊತ್ತಿದೆ. ಕನಿಷ್ಠ ಪಂಚಾಯತು ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ್ಯತೆ ಇಲ್ಲದ ಅವರಿಗೆ, ಬಂಟ್ವಾಳದಲ್ಲಿ ಆರು ಬಾರಿ ಶಾಸಕರಾಗಿ, ಸಚಿವರಾಗಿ ತನ್ನ ಅಧಿಕಾರವಾಧಿಯಲ್ಲಿ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿರುವ ರಮಾನಾಥ ರೈಯವರ ಬಗ್ಗೆ ಮಾತಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ತಿರುಗೇಟು ನೀಡಿದರು.
ಕಮಿಷನ್‍ನಲ್ಲೇ ಹರಿಕೃಷ್ಣರ ಜೀವನ:
ಅಧಿಕಾರದಲ್ಲಿರುವಾಗ ಬಿ.ಜನಾರ್ದನ ಪೂಜಾರಿಯವರ ಜತೆಯಲ್ಲಿದ್ದು ಅವರು ನಾನಾ ಯೋನೆಗಳಿಗೆ ಕೊಡುತ್ತಿದ್ದ ಅನುದಾನದಲ್ಲಿ ಕಮಿಷನ್ ಪಡೆದು ಬದುಕುತ್ತಿದ್ದ, ಬಿಲ್ಲವ ಮುಖಂಡ ಎಂದು ಹೇಳುತ್ತಿದ್ದ ಹರಿಕೃಷ್ಣ ಬಂಟ್ವಾಳರಿಗೆ ಪೂಜಾರಿಯವರನ್ನೇ ಗೆಲ್ಲಿಸಲು ಸಾಧ್ಯವಾಗಿಲ್ಲ. ವಿಧಾನ ಪರಿಷತ್ತು ಚುನಾವಣೆಲ್ಲಿ ಸ್ಪರ್ಧಿಸಿ ಕೇವಲ 127 ಮತ ಪಡೆದಿದ್ದ ಇವರು ಈಗ ರಾಜೇಶ್ ನಾೈಕ್ ಅವರನ್ನು ತಾನೇ ಗೆಲ್ಲಿಸಿದ್ದು ಎಂದು ಎಲ್ಲಡೆ ಬಿಂಬಿಸುತ್ತಿರುವುದು ನಾಚಿಗೆಗೇಡಿನ ವಿಚಾರವಾಗಿದೆ. ತನ್ನ ಪ್ರಚಾರಕ್ಕೆ ಬೆಲೆ ಬರಬೇಕೆಂದು ಪದೇ ಪದೇ ರಮಾನಾಥ ರೈಯವರ ಮೇಲೆ ಆರೋಪ ಮಾಡುತ್ತಿದ್ದ ಹರಿಕೃಷ್ಣ ಬಂಟ್ವಾಳ್ ಇದೀಗ ನನ್ನ ಮೇಲೆ ಆಕ್ರಮ ಮರಳುಗಾರಿಕೆ ಮತ್ತು ಬಿ.ಪದ್ಮಶೇಖರ ಜೈನ್ ಅವರ ಮೇಲೆ ಆಕ್ರಮ ಗಣಿಗಾರಿಕೆಯ ಆಪಾದನೆ ಮಾಡಿದ್ದಾರೆ, ಇದು ರಾಜಕೀಯವಾಗಿ ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವ ದುರುದ್ಧೇಶವಾಗಿದ್ದು ಈ ಅರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ನನ್ನ ಮರಳುಗಾರಿಕೆಯಾಗಲಿ, ಪದ್ಮಶೇಖರ ಜೈನ್ ಅವರ ಗಣಿಗಾರಿಕೆಯಾಗಲಿ ಅದು ಕಾನೂನು ರೀತಿಯಲ್ಲೇ ಅಧೀಕೃತವಾಗಿ ಹಲವು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ದಾಖಲೆಗಳು ನಮ್ಮ ಬಳಿ ಇದೆ. ನಮಗೆ ಮಾಡಲು ಉದ್ಯೋಗವಿದೆ, ಯಾರ ಕೈಯಿಂದಲೂ ಕಮಿಷನ್ ಪಡೆದುಕೊಳ್ಳುವ, ಆಕ್ರಮ ವ್ಯವಹಾರ ನಡೆಸುವ ಅವಶ್ಯಕತೆ ಇಲ್ಲ. ಆದರೆ ಕಮಿಷನ್ ಪಡೆದೇ ಜೀವನ ನಡೆಸುತ್ತಿರುವ ಹರಿಕೃಷ್ಣ ಬಂಟ್ವಾಳ್ ಅವರಿಗೆ ನಮ್ಮ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು.
ಶಾಸಕರ ಆಪ್ತರಿಂದಲೇ ಆಕ್ರಮ ವ್ಯವಹಾರ:
ಬಿಜೆಪಿಯ ಮುಖಂಡರು ಮತ್ತು ಶಾಸಕ ರಾಜೇಶ್ ನಾೈಕ್ ಅವರ ಆಪ್ತರೇ ಆಕ್ರಮ ವ್ಯಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಬಗ್ಗೆ ಮಾತಾಡದ ಹರಿಕೃಷ್ಣ ಬಂಟ್ವಾಳ್ ಅಧಿಕೃತವಾಗಿ ವ್ಯವಹಾರ ಮಾಡುವ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನಮ್ಮ ವೈಯಕ್ತಿಕ ತೇಜೋವಧೆಗೆ ಷಡ್ಯಂತ್ರ ನಡೆಸುತ್ತಿದ್ದಾರೆ. ಇವರೇನೂ ಸಾಚಾ ಅಲ್ಲ, ಇವರ ಮೇಲೂ ಕೊಲೆ ಆರೋಪದ ದೂರುಗಳಿವೆ. ಸಂದರ್ಭ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇವೆ. ಮೂಲರಪಟ್ನ ಸೇತುವೆ ಕುಸಿತಕ್ಕೆ ಆಕ್ರಮ ಮರಳುಗಾರಿಕೆ ಕಾರಣವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅಲ್ಲಿಯೂ ಬಿಜೆಪಿಯವರೇ ಆಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದಾರೆ. ಮರಳುಗಾರಿಕೆಯೊಂದೇ ಅದಕ್ಕೆ ಕಾರಣವಲ್ಲ, ಎಂಆರ್‍ಪಿಎಲ್‍ನ ಪೈಫ್‍ಲೈನ್ ಹಾದು ಹೋಗಿರುವುದು ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿಯವರು ಮಾತಾಡುತ್ತಿಲ್ಲ. ಯಾಕೆಂದರೆ ಬಿಜೆಪಿಯವರೇ ಇದರ ಗುತ್ತಿಗೆ ವಹಿಸಿಕೊಂಡವರು ಎಂದು ಹೇಳಿದ ಚಂದ್ರಪ್ರಕಾಶ್ ಶೆಟ್ಟಿ ಆಕ್ರಮ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ನಾಯಕರ ಪಟ್ಟಿಯನ್ನು ಬಹಿರಂಗ ಪಡಿಸಿದರು.
ಶಾಸಕರಿಗೆ ಮಾಹಿತಿಯ ಕೊರತೆ:
ಸರಕಾರಿ ಅನುದಾನ ಉಪಯೋಗವಾಗುತ್ತಿಲ್ಲ ಎಂದು ಶಾಸಕ ರಾಜೇಶ್ ನಾೈಕ್ ಅವರು ಹೇಳಿಕೆ ನೀಡಿರುವುದು ಅವರ ಮಾಹಿತಿಯ ಕೊರತೆಯನ್ನು ಸಾಬೀತು ಪಡಿಸಿದೆ. ಯಾರೋ ಹೇಳಿ ಕೊಟ್ಟ ಮಾತನ್ನು ಹೇಳುವ ಮೂಲಕ ಅವರು ತಮ್ಮ ಶಾಸಕ ಸ್ಥಾನದ ಜವಾಬ್ಧಾರಿಯನ್ನು ಮರೆತಂತಿದೆ. ಬಂಟ್ವಾಳಕ್ಕೆ ಸರಕಾರದಿಂದ ಬಂದ ಎಲ್ಲಾ ಅನುದಾನಗಳೂ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿದೆ. ಮಿನಿ ವಿಧಾನ ಸೌಧ, ಮೆಸ್ಕಾಂ ಕಟ್ಟಡ, ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣ, ಅಂಬೇಡ್ಕರ್ ಭವನ, ಪಂಜೆ ಮಂಗೇಶರಾಯ ಸಭಾಂಗಣ, ಬಹುಗ್ರಾಮ ಕುಡಿಯವ ನೀರಿನ ಯೋಜನೆ, ಒಳಚರಂಡಿ ಯೋಜನೆ, ತಾಲೂಕು ಕ್ರೀಡಾಂಗಣ, ಕಡೇಶಿವಾಲಯ-ಅಜಿಲಮೊಗರು ಸೌಹಾರ್ದ ಸೇತುವೆ, ಪುರಸಭಾ ವ್ಯಾಪ್ತಿಯಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಮೊದಲಾದವುಗಳು ಸಾರ್ವಜನಿಕರಿಗೆ ಪ್ರಯೋಜನವಾಗಿಲ್ಲವೇ ಎಂದು ಪ್ರಶ್ನಿಸಿದ ಚಂದ್ರಪ್ರಕಾಶ್ ಶೆಟ್ಟಿ ಇಂತಹ ಹೇಳಿಕೆಗಳನ್ನು ನೀಡಿ ಜನತೆಯನ್ನು ಹಾದಿ ತಪ್ಪಿಸುವ ಬದಲು ಅಭಿವೃದ್ಧಿ ಕಾರ್ಯ ಮಾಡಿ ತೋರಿಸಲಿ. ತಮ್ಮದೇ ಪಕ್ಷದ ಸಂಸದರೂ ಇದ್ದಾರೆ, ಬಿ.ಸಿ.ರೋಡಿನ ಪ್ಲೈಓವರ್ ಸಮಸ್ಯೆ ಮತ್ತು ಹೆದ್ಧಾರಿ ಅವ್ಯವಸ್ಥೆಗೆ ಪರಿಹಾರ ಕಲ್ಪಿಸಲಿ ಎಂದು ಸವಾಲೆಸೆದರು.
ಇವರ ಹಿಂದುತ್ವ ಯಾವುದು?:
ಕಲ್ಲಡ್ಕ ಪ್ರಭಾಕರ ಭಟ್ ಮತ್ತು ರಾಜೇಶ್ ನಾೈಕ್ ಈಗ ಶಾಂತಿಯ ಮಂತ್ರವನ್ನು ಜಪಿಸುತ್ತಿದ್ದಾರೆ. ಇದನ್ನೇ ಮೊದಲು ಹೆಳುತ್ತಿದ್ದರೆ ಐದು ಜೀವಗಳನ್ನು ಉಳಿಸಬಹುದಿತ್ತು. ನಾಲ್ಕು ಹತ್ಯೆಯಲ್ಲಿ ಬಿಜೆಪಿಗರು, ಮತ್ತು ಒಂದು ಹತ್ಯೆಯಲ್ಲಿ ಎಸ್‍ಡಿಪಿಐಯವರು ಇರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾವು ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಿಲ್ಲ ಎನ್ನುವ ಇವರಿಗೆ ಹರೀಶ್ ಪೂಜಾರಿ ನಾವೂರು, ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ, ಕಾರ್ತಿಕ್ ರಾಜ್, ಕಾಂತಪ್ಪ ಪೂಜಾರಿ ಹಿಂದುಗಳೆಂದು ಗೊತ್ತಿಲ್ಲವೇ? ಹಾಗಾದರೆ ಭಟ್ಟರ ಹಿಂದುತ್ವ ಯಾವುದು? ಎಂದು ಚಂದ್ರಪ್ರಕಾಶ್ ಶೆಟ್ಟಿ ಪ್ರಶ್ನಿಸಿದರು.
ಜಿಲ್ಲಾ ಪಂಚಾಯತು ಸದಸ್ಯ ಬಿ.ಪದ್ಮಶೇಖರ ಜೈನ್, ಪಕ್ಷದ ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಬೇಬಿ ಕುಂದರ್, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಪ್ರಶಾಂತ್ ಕುಲಾಲ್, ಜಗದೀಶ ಕೊಯಿಲ, ಲೋಲಾಕ್ಷ ಶೆಟ್ಟಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

* ಗೋಪಾಲ ಅಂಚನ್

By suddi9

Leave a Reply

Your email address will not be published. Required fields are marked *