ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಬಡ್ಡಕಟ್ಟೆ-ಹೊಸ್ಮಾರು ಸಂಪರ್ಕಿಸುವ ಕಿರು ಸೇತುವೆಯು ಮಂಗಳವಾರ ದಿನವಿಡೀ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಅಚ್ಚರಿ ಮೂಡಿಸಿದೆ.
ಕಳೆದ 22 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಕಿರು ಸೇತುವೆಯಿಂದಾಗಿ ಇಲ್ಲಿನ ಬಡ್ಡಕಟ್ಟೆ- ಹೊಸ್ಮಾರು ಪ್ರದೇಶದ ಜನರಿಗೆ ತ್ವರಿತವಾಗಿ ಪೇಟೆ ತಲುಪಲು ಸಾಧ್ಯವಾಗುತ್ತಿತ್ತು. ಇದೀಗ ಸೋಮವಾರ ರಾತ್ರಿ ಭಾರೀ ಗಾಳಿ ಮಳೆಯಾಗಿದ್ದು, ಮಂಗಳವಾರ ಮತ್ತೆ ದಿನವಿಡೀ ಮಳೆಯಾಗಿದೆ.

19btl-Bridgeಇದರಿಂದಾಗಿ ಕಿರುಸೇತುವೆ ಅಡಿ ಭಾಗದಲ್ಲಿ ತೋಡು ತುಂಬಿ ಹರಿಯುತ್ತಿದ್ದ ವೇಳೆ ಎರಡೂ ಬದಿ ಮಣ್ಣು ಸವೆದು ಹೋಗಿದೆ. ಈ ಸಂದರ್ಭದಲ್ಲಿ ಸೇತುವೆಗಾಗಿ ನಿರ್ಮಿಸಿದ್ದ ಮೂರು ಆಧಾರ ಸ್ತಂಭಗಳ ಪೈಕಿ ಒಂದು ನೆರೆಯಲ್ಲಿ ಕೊಚ್ಚಿ ಹೋಗಿದೆ. ಇದೇ ವೇಳೆ ಕಿರು ಸೇತುವೆ ತಗ್ಗು ಪ್ರದೇಶಕ್ಕೆ ಕುಸಿದು ಬಿದ್ದು ಎರಡೂ ಪ್ರದೇಶಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಪ್ರತಿದಿನ ನೂರಾರು ಮಂದಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರು ತೋಡು ದಾಟಲು ಇದೇ ಸೇತುವೆ ಅವಲಂಬಿಸಿದ್ದರು. ಈ ಸೇತುವೆ ಎರಡೂ ಬದಿ ಸುರಕ್ಷತೆಗಾಗಿ ಅಳವಡಿಸಿದ್ದ ಕಬ್ಬಿಣದ ಸರಳು ಕೂಡಾ ಮುರಿದು ಹಾನಿಗೀಡಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಕೂಡಲೇ ಪುರಸಭೆ ವತಿಯಿಂದ ಕಿರು ಸೇತುವೆ ಪುನರ್ ನಿರ್ಮಾಣಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *