charmadi_0

ಬೆಳ್ತಂಗಡಿ: ಕಳೆದ ನಾಲ್ಕು ದಿನಗಳಿಂದ ಸಂಚಾರ ರಹಿತವಾಗಿದ್ದ ಚಾರ್ಮಾಡಿ ಕಣಿವೆಯಲ್ಲಿ ಘಾಟಿ ರಸ್ತೆ ಜೂನ್ 15ರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234ರಲ್ಲಿನ ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗಿನ ರಸ್ತೆಯಲ್ಲಿ ಸುಮಾರು 22 ಕಿ.ಮೀ. ರಸ್ತೆಯು ಘಾಟಿ ಪ್ರದೇಶದಲ್ಲಿ ತಿರುವು ಮುರುವಾಗಿ ಹಾದು ಹೋಗುತ್ತಿದೆ. 11 ಅಪಾಯಕಾರಿ ತಿರುವುಗಳು ಈ ರಸ್ತೆಯಲ್ಲಿವೆ. ದ.ಕ. ಮತ್ತು ಚಿಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಮತ್ತು ಹಾಸನ, ಬೆಂಗಳೂರು ಮೊದಲಾದ ಮಹಾನಗರವನ್ನು ಸಂಪರ್ಕಿಸುವ ಈ ರಸ್ತೆ ರಾಜ್ಯದ ಪ್ರಮುಖ ಹೆದ್ದಾರಿಯಾಗಿದೆ.

ಶಿರಾಡಿ ಘಾಟಿ ರಸ್ತೆಯು ಪರ್ಯಾಯ ರಸ್ತೆ ಹಾಗೂ ಸನಿಹದ ರಸ್ತೆಯಾಗಿದ್ದರೂ ರಸ್ತೆ ಅಭಿವೃದ್ಧಿ ನಿಮಿತ್ತ ಅಲ್ಲಿನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಕಳೆದ ಮೂರು ತಿಂಗಳಿಗಿಂತಲೂ ಹೆಚ್ಚಾಗಿ ಎಲ್ಲಾ ವಾಹನಗಳು ಚಾರ್ಮಾಡಿ ರಸ್ತೆಯ ಮೂಲಕವೇ ಹೋಗಲು ಪ್ರಾರಂಭಿಸಿದ್ದವು. ಇದೇ ಸಮಯದಲ್ಲಿ ಮಳೆಗಾಲವೂ ಪ್ರಾರಂಭವಾಯಿತು. ವಾಹನ ಸಂಚಾರದ ವಿಪರೀತ ಒತ್ತಡ ಹಾಗೂ ಭಾರೀ ಮಳೆಯಿಂದಾಗಿ ಕಣಿವೆಯ ದುರ್ಗಮ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯಲು, ಮರಗಳು ಬೀಳಲು ಪ್ರಾರಂಭವಾಗತೊಡಗಿದ್ದವು. ಹೀಗಾಗಿ ಆಗ್ಗಾಗ್ಗೆ ಸಂಚಾರ ಸ್ಥಗಿತವಾಗುವುದು ನಡೆಯುತ್ತಿತ್ತು. ಜೂ. 11 ಮತ್ತು 12ರಂದು ರಸ್ತೆಯ ಎರಡನೇ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಇಕ್ಕೆಲಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಸುಮಾರು 15 ಗಂಟೆಗಳ ಪ್ರಯಾಣಿಕರು ಪರದಾಡುವಂತಾಯಿತು. ಇತ್ತ ಮಳೆಯ ಪ್ರಮಾಣ ಹೆಚ್ಚಾದಂತೆ ಉಳಿದ ತಿರುವುಗಳಲ್ಲೂ ಧರೆ ಕುಸಿಯಲು ಪ್ರಾರಂಭವಾಗತೊಡಗಿತು. ಹೀಗಾಗಿ ಜಿಲ್ಲಾಡಳಿತ ಜೂ. 13 ಮತ್ತು 14ರಂದು ರಸ್ತೆ ಮೇಲೆ ಬಿದ್ದ ಮಣ್ಣು, ಮರಗಳ ತೆರವಿಗೋಸ್ಕರ ಸಂಚಾರ ನಿಷೇಧ ಮಾಡಿತ್ತು.

ಬುಧವಾರ ಮತ್ತು ಗುರುವಾರ ಸುಮಾರು 13 ಕ್ಕೂ ಹೆಚ್ಚು ಜೆಸಿಬಿ, ಟಿಪ್ಪರ್ ಯಂತ್ರಗಳು ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಿದವು. ರಸ್ತೆಗೆ ಬಿದ್ದಿದ್ದ ಜರಿದು ಹೋದ ಮಣ್ಣನ್ನು ಬದಿಗೆ ಸರಿಸಲಾಯಿತು. ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ತೆರವುಗೊಳಿಸಿದರು. ಘನ ಅರಣ್ಯದ ಮಧ್ಯೆ, ಅಪಾಯಕಾರಿ ತಿರುವುಗಳ ಮಧ್ಯೆ ಎರಡು ದಿನಗಳ ಅವಿರತ ಶ್ರಮದಿಂದಾಗಿ ರಸ್ತೆ ಮೊದಲಿನಂತೆ ಮಾಡಲಾಗಿದೆ. ಎರಡು ದಿನಗಳ ಕಾಲ ಮಳೆಯೂ ಕೊಂಚ ವಿರಾಮ ನೀಡಿದ್ದರಿಂದ ಕೆಲಸ ಸುಗಮವಾಗಿ ಸಾಗುವಂತಾಗಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ವಾಹನಗಳು ಸಂಚರಿಸಬಹುದೆಂದು ಜಿಲ್ಲಾಡಳಿತ ತಿಳಿಸಿದೆ.

By suddi9

Leave a Reply

Your email address will not be published. Required fields are marked *