ಬೆಳ್ತಂಗಡಿ: ಕಾಂಕ್ರೀಟ್ ರಸ್ತೆ ಕಾಮಗಾರಿಯ ಪ್ರಯುಕ್ತ ಶಿರಾಡಿ ಘಾಟಿಯಲ್ಲಿನ ರಸ್ತೆ ಸಂಚಾರವನ್ನು ನಿರ್ಬಂಧಿಸಿದ ಬಳಿಕ ಘಟ್ಟ ಪ್ರದೇಶಕ್ಕೆ ಹೋಗುವ ವಾಹನಗಳೆಲ್ಲಾ ಚಾರ್ಮಾಡಿ ಕಣಿವೆ ರಸ್ತೆಯ ಮೂಲಕ ಸಂಚಾರ ಆರಂಭಿಸಿದ್ದವು.
ಮಳೆಗಾಲ ಆರಂಭವಾಗುವ ತನಕ ಚಾರ್ಮಾಡಿ ರಸ್ತೆಯಲ್ಲಿ ಸಂಚಾರ ಸುಗಮವಾಗಿಯೇ ಇತ್ತು. ಆದರೆ ಇದೀಗ ಮಳೆಗಾಲ ಪ್ರಾರಂಭವಾದ ಕಳೆದ 20 ದಿನಗಳಿಂದೆಚೆಗೆ ಸಂಚಾರ ದಟ್ಟಣೆಯಿಂದಾಗಿ ವಾಹನದ ಮೂಲಕ ಹೋಗಲು ಹರ ಸಾಹಸ ಪಡಬೇಕಾಗಿ ಬಂದಿದೆ.
ಪ್ರಮುಖ ಧಾರ್ಮಿಕ ಕ್ಷೇತ್ರ ಮತ್ತು ವಾಣಿಜ್ಯ ಕ್ಷೇತ್ರಗಳನ್ನು ಸಂಪರ್ಕಿಸಲು ಚಾರ್ಮಾಡಿ ಘಾಟಿ ರಸ್ತೆಯೇ ಪ್ರಮುಖ ರಸ್ತೆಯಾಗಿದ್ದು ಇದೀಗ ರಸ್ತೆಯ ಅವ್ಯವಸ್ಥೆಯಿಂದ ಪ್ರಯಾಣಿಕರು, ವಾಹನ ಚಾಲಕ ಮಾಲಕರು ಪರದಾಡುವಂತಾಗದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಅಧಿಕ ಮಳೆಯಾಗುತ್ತಿದ್ದು ಈ ಮಳೆಗೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಬೃಹತ್ ಮರಗಳು ಧರಗುಳಿದಿದ್ದು ಆ ಸಂದರ್ಭದಲ್ಲಿ ತಾಸುಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖಾ ನಿರ್ಲಕ್ಷ್ಯತೆಯಿಂದ ಒಂದು ವಾರ ಕಳೆದರೂ ಮರಗಳ ತೆರವು ಮಾಡದೆ ಇರುವುದರಿಂದ ಮತ್ತೆ ಭಾನುವಾರ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿದಾಡುತ್ತಿದ್ದು ಕೆರೆಯಂತೆ ರಸ್ತೆಗಳು ಗುಂಡಿಯಲ್ಲಿ ಮುಳುಗಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದು ಒಂದು ಹೊಂಡವನ್ನು ತಪ್ಪಿಸಲು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ದ್ವಿಚಕ್ರ ವಾಹನ ಸವಾರರು ಹಾಗೂ ಇನ್ನಿತರ ಲಘುವಾಹನ ಸವಾರರು ಗುಂಡಿಯಲ್ಲಿ ಬೀಳುವಂತಾಗಿದ್ದು, ಚಾಲಕರು ಈ ರಸ್ತೆಯಲ್ಲಿ ವಾಹನವನನ್ನು ಚಲಾಯಿಸಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಹಿಂಬದಿಯ ರಸ್ತೆಯಲ್ಲಿ ಇತರ ವಾಹನಗಳು ಸರತಿಯ ಸಾಲಿನಲ್ಲಿ ನಿಲ್ಲುವಂತಾಗಿದೆ.
ಶಿರಾಡಿ ಘಾಟಿ ಕಾಮಗಾರಿ ಪ್ರಾರಂಭವಾಗುವ ಮುಂಚೆಯೇ ಸ್ಥಳಿಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾಧ್ಯಮದ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆಗಳಿಗೆ ಎಚ್ಚರಿಸಿದ್ದರೂ ಅಧಿಕಾರಿಗಳು ಸ್ಪಂದನೆ ನೀಡಲಿಲ್ಲ.
ವ್ಯಾಪಾರಿಗಳು ಧಾರ್ಮಿಕ ಕ್ಷೇತ್ರಕ್ಕೆ ಸಂದಶರ್ಶಿಸುವ ಭಕ್ತಾಧಿಗಳು ತೊಂದರೆಯನ್ನು ಅನುಭವಿಸುತ್ತಿದ್ದು ಮುಂದಿನ ದಿನಗಳಲ್ಲಿ ಶೀಘ್ರ ಪರಿಹಾರ ಸೂಚಿಸದಿದ್ದಲ್ಲಿ ರಸ್ತೆ ತಡೆ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಾಗುವುದು. ಇದಕ್ಕೆ ಅವಕಾಶ ಕೊಡದೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಪ್ರಯಾಣಿಕರು ತಿಳಿಸಿದ್ದಾರೆ.

