mundaje_nnr_newsk_76585

ಬೆಳ್ತಂಗಡಿ: ಮುಂಗಾರು ಮಳೆಯ ಅಬ್ಬರದಿಂದ ತಾಲೂಕಿನಾದ್ಯಂತ ಸುರಿದ ಭಾರೀ ಗಾಳಿ ಮಳೆಯಿಂದ ಅಲ್ಲಲ್ಲಿ ಮಳೆ ಸಂಭವಿಸಿದೆ.

ಗುರುವಾರದಿಂದ ಭಾರೀ ಗುಡುಗು, ಗಾಳಿ ಸಹಿತ ಮಳೆಯಿಂದ ಮರಗಳು ಉರುಳಿ ಹಲವು ಕಡೆ ನಷ್ಟ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 234 ಮಂಗಳೂರು-ವಿಲ್ಲಪುರಂನ ಮುಂಡಾಜೆಯ ಬಳಿ ಅಂಬಡ್ತ್ಯಾರು ಎಂಬಲ್ಲಿ ಶನಿವಾರ ಮರ ಉರುಳಿ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿರಾಡಿ ಘಾಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ವಾಹನಗಳು ಸಂಚರಿಸುತ್ತಿದೆ. ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದೆ. ರಸ್ತೆಗೆ ಮರ ಬಿದ್ದುದರಿಂದ ವಾಹನಗಳ ಸಂಚಾರಕ್ಕೆ ತಡೆಯಾಯಿತು. ವಾಹನಗಳ ದಟ್ಟಣೆಯಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು.

ವಾಟ್ಸಾಪ್ ಗ್ರೂಫ್ ಸದಸ್ಯರ ಶ್ರಮದಾನ: ಇಲ್ಲಿನ ಸ್ಥಳೀಯರ ಮುಂಡಾಜೆ ಪ್ರೆಂಡ್ಸ್ ವಾಟ್ಸಾಪ್ ಗ್ರೂಫ್ ಇದ್ದು ರಸ್ತೆಗೆ ಮರ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಇದರ ಸದಸ್ಯರು ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಭಾರೀ ಗಾತ್ರದ ಮರವನ್ನು ಮಳೆಯನ್ನು ಲೆಕ್ಕಿಸದೇ ಸುಮಾರು ಒಂದೂವರೆ ಗಂಟೆಯ ಶ್ರಮದಾನದ ಮೂಲಕ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳೀಯ ವಾಟ್ಸಾಪ್ ಗ್ರೂಫ್ ನ ಸಾಮಾಜಿಕ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ರಸ್ತೆಯ ಎರಡು ಬದಿಗಳಲ್ಲೂ ಸುಮಾರು ಒಂದೂವರೆ ಕಿ.ಮೀ. ನಷ್ಟು ವಾಹನಗಳು ಸಂಚಾರ ಅಸ್ತವ್ಯಸ್ತದಿಂದ ಸಾಲುಗಟ್ಟಿ ನಿಂತಿತ್ತು. ಮರವನ್ನು ತೆರವುಗೊಳಿಸುತ್ತಾ ವಾಹನಗಳನ್ನು ಒಂದೊಂದಾಗಿ ಬಿಡಲಾಯಿತು. ಒಂದೂವರೆ ಗಂಟೆಯಲ್ಲಿ ರಸ್ತೆ ಸಂಚಾರಕ್ಕೆ ಯೋಗ್ಯವನ್ನಾಗಿಸುವ ಸಮಯಕ್ಕೆ ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಆಗಮಿಸಿತ್ತು.

By suddi9

Leave a Reply

Your email address will not be published. Required fields are marked *