dharmastal_nnr_newsk_38432

ಬೆಳ್ತಂಗಡಿ: ಧರ್ಮಸ್ಥಳದಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ಕಳೆದ ಐದಾರು ವರ್ಷಗಳಿಂದ ಅವ್ಯವಸ್ಥೆಗಳಿದ್ದರೂ ಅದನ್ನು ಯಾರೂ ಹೊರಗಡೆ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ನಿಗಮದ ಚಾಲಕ ನೌಕರೊಬ್ಬರರ ತಾಳ್ಮೆಯ ಕಟ್ಟೆ ಒಡೆದ ಪರಿಣಾಮ ಅಲ್ಲಿನ ಪರಿಸ್ಥಿತಿ ಹೊರಗಿನ ಜಗತ್ತಿಗೆ ಗೊತ್ತಾಗುವಂತಾಗಿದೆ.

ಹೊಸ ಟಯರ್ ಗಳನ್ನು ಮಾರಾಟ ಮಾಡಿ ರಿಸೋಲ್ ಮಾಡಿರುವ ಟಯರ್ ಗಳನ್ನು ಬಸ್ ಗಳಿಗೆ ಜೋಡಿಸುವುದು, ಚಕ್ರಕ್ಕೆ ಬೋಲ್ಟ್ ನಟ್ಟ್ ಗಳನ್ನು ಸರಿಯಾಗಿ ಜೋಡಿಸದಿರುವುದು ಮತ್ತು ಕಡಿಮೆ ಜೋಡಿಸುವುದು, ನೌಕರರನ್ನು ಅತಿಯಾಗಿ ದುಡಿಸಿಕೊಳ್ಳುವುದು, ಧರ್ಮಸ್ಥಳ-ಮಂಗಳೂರಿಗೆ ಸಾಕಷ್ಟು ಬಸ್ ಗಳನ್ನು ಓಡಿಸದೇ ಇರುವುದು ಇತ್ಯಾದಿ ಹಲವಾರು ದೂರುಗಳು ಆಗ್ಗಾಗ್ಗೆ ಕೇಳಿಬರುತ್ತಿದ್ದವು. ಸುಮಾರು ಐದು ವರ್ಷಗಳ ಹಿಂದೆ ಅಧಿಕಾರಿಯೊಬ್ಬರ ಕಾರ್ಯಕ್ಷಮತೆಯಿಂದ ಧರ್ಮಸ್ಥಳ ಡಿಪೋ ಲಾಭದಾಯಕ ಡಿಪೋ ಎಂದು ಹೆಸರು ಮಾಡಿತ್ತು. ಆದರೆ ಅವರ ವರ್ಗಾವಣೆಯಾದ ಬಳಿಕ ಮತ್ತೆ ಆ ರೀತಿಯ ಹೆಸರು ಕೇಳಿಬಂದಿರಲಿಲ್ಲ.

ಇದೀಗ ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋದ ಅವ್ಯವಸ್ಥೆಯ ಬಗ್ಗೆ ಚಾಲಕ ರಮೇಶ್ ಅವರು ಮಾಡಿರುವ ವೀಡಿಯೋ ವೈರಲ್ ಆಗಿದ್ದು, ರಾಜ್ಯ ಮಟ್ಟದ ಅಧಿಕಾರಿಗಳು ಧರ್ಮಸ್ಥಳ ಡಿಪೋಗೆ ಆಗಮಿಸಿ ಪರಿಶೀಲಿಸುವಂತಾಗಿದೆ. ಡಿಪೋದಲ್ಲಿ ಕನಿಷ್ಠ ಮೂಲ ಸೌಲಭ್ಯಗಳೇ ಇಲ್ಲದೆ ಸುಸ್ಥಿತಿಯಲ್ಲಿಲ್ಲದ ಬಸ್ ಗಳನ್ನು ನೀಡಿ ಚಲಾಯಿಸಲು ಹೇಳುತ್ತಾರೆ. ಚಾಲಕರು ಹಾಗೂ ನಿರ್ವಾಹಕರು ಮುಖ ತೊಳೆಯಲು ನೀರಿನ ವ್ಯವಸ್ಥೆ ಇಲ್ಲ. ಬೇಸಿನ್ ನಲ್ಲಿ ಜಿರಳೆಗಳು ತುಂಬಿದೆ. ಶೌಚಾಲಯ ಗಬ್ಬು ನಾರುತ್ತಿದೆ. ಚಾಲಕರೇ ಬಸ್ ತೊಳೆಯಬೇಕಿದೆ. ಬಸ್ ಗಳಿಗೆ ರಿಸೋಲ್ಡ್ ಟಯರ್ ಗಳನ್ನು ಬಳಸಲಾಗುತ್ತಿದೆ. ಹಾನಿಯಾದರೆ ಚಾಲಕರು, ನಿರ್ವಾಹಕರು, ತಾಂತ್ರಿಕ ವರ್ಗ ದಂಡ ಕಟ್ಟಬೇಕಾಗುತ್ತದೆ. ಪ್ರಶ್ನಿಸಿದರೆ ವಜಾ ಮಾಡುವ ಬಗ್ಗೆ ಮಾತನಾಡುತ್ತಾರೆ. ಈ ಎಲ್ಲಾ ಸಮಸ್ಯೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಕಳೆಯಬೇಕಿದೆ ಎಂದು ವೀಡಿಯೋದಲ್ಲಿ ತಿಳಿಸಲಾಗಿದೆ.

ಡೀಸಲ್ ಹಾಕಲು ಹಳೇ ಯಂತ್ರ
ಡಿಪೋದ ಡೀಸೆಲ್ ಬಂಕ್ ನ ಯಂತ್ರ ಹಾಳಾಗಿದ್ದು, ಡೀಸೆಲ್ ತುಂಬಲು ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ. ಹೊಸ ಯಂತ್ರ ಬಂದಿದ್ದರೂ ಜೋಡಣೆ ಕಾರ್ಯ ಮಾಡದೇ ಬಿಸಿಲು ಮಳೆಯಲ್ಲಿ ಇಡಲಾಗಿದೆ ಎಂದು ಚಾಲಕ ತಿಳಿಸಿದ್ದಾರೆ. ಡಿಪೋದಲ್ಲಿ ಸೂಕ್ತ ಕ್ಯಾಂಟೀನ್ ಇಲ್ಲದೆ ಸಮಸ್ಯೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಡಿಪೋದ ಮುಖ್ಯ ದ್ವಾರದ ಮುಂದೆಯೇ ಕಸ ಎಸೆಯುತ್ತಿರುವ ಬಗ್ಗೆಯೂ ದೂರಿದ್ದಾರೆ.

ಅಧಿಕಾರಿಗಳ ಭೇಟಿ
ಫೇಸ್ ಬುಕ್, ವ್ಯಾಟ್ಸ್ಆ್ಯಪ್ ನಲ್ಲಿ ವೀಡಿಯೋ ವೈರಲ್ ಆಗಿರುವುದನ್ನು ಗಮನಿಸಿ ಬೆಂಗಳೂರಿನಿಂದ ಡೆಪ್ಯುಟಿ ಚೀಪ್ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ವಿಭಾಗೀಯ ತಾಂತ್ರಿಕ ಅಭಿಯಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಶಿಸ್ತು ಕ್ರಮ
ಸ್ವಾಭಾವಿಕವಾಗಿ ಕಟ್ಟಡ ಹಾಗೂ ವಸ್ತುಗಳು ಹಳೆಯದಾಗಿವೆ. ಆದ್ದರಿಂದ ಕಾರ್ಯನಿರ್ವಹಣೆ ಸ್ವಲ್ಪ ನಿಧಾನವಾಗುತ್ತಿದೆ. ಆದರೆ ಸುಮಾರು 1ಕೋಟಿ ರೂ. ವೆಚ್ಚದಲ್ಲಿ ಡಿಪೋ ವಿಸ್ತರಣಾ ಕಾಮಗಾರಿ ನಡೆಯುತ್ತಿದೆ. 1 ತಿಂಗಳಲ್ಲಿ ಸಿದ್ಧವಾಗಿ ಸೇವೆಗೆ ಲಭ್ಯವಾಗಲಿದೆ. ವಿನಾ ಕಾರಣ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಸಂಸ್ಥೆಯ ಒಳಗೆ ಅನುಮತಿ ಪಡೆಯದೆ ಚಿತ್ರೀಕರಣ ಮಾಡಿರುವ ಬಗ್ಗೆ ಶಿಸ್ತು ಕ್ರಮ ಜರಗಿಸಲಾಗುತ್ತದೆ ಎಂದು ಧರ್ಮಸ್ಥಳ ಡಿಪೋ ಮ್ಯಾನೇಜರ್ ಪಾಪಾ ನಾಯಕ್ ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *