0205rjh2-clr-404x227

ಪುತ್ತೂರು: ಪುತ್ತೂರು ಪ್ರಸ್ತುತ ಜಿಲ್ಲೆಯ ಎರಡನೇ ವಾಣಿಜ್ಯ ಕೇಂದ್ರ. ಇಲ್ಲಿ ಸ್ವಲ್ಪ ಮಟ್ಟಿಗೆ ಭತ್ತದ ಕೃಷಿ ಇದ್ದರೂ ತೋಟಗಾರಿಕಾ ಬೆಳೆಯಾಗಿರುವ ಅಡಕೆ ಕೃಷಿಯದ್ದೇ ಸಿಂಹಪಾಲು. ಯಾವ ಹಳ್ಳಿಯ ಮೂಲೆಗೆ ಹೋದರೂ ಎದ್ದು ಕಾಣುತ್ತಿರುವುದು ಅಡಕೆ ತೋಟ. ರೈತರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿರುವ ಅಡಕೆ ಇಲ್ಲಿಯ ಜನತೆ ಪ್ರೀತಿಯ ಕೃಷಿ.

ಅಡಕೆ ಬೆಳೆಯುವ ರೈತರು ತುಂಬಿರುವ ಪುತ್ತೂರು ತಾಲೂಕಿನಲ್ಲಿ ತೋಟಗಾರಿಕಾ ಇಲಾಖೆ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಅಡಕೆ ರೈತರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಇಲಾಖೆಯಿಂದ ನಡೆಯಬೇಕಾಗಿದೆ. ಅಡಕೆಯನ್ನು ಕೊಳೆರೋಗ ಬಾಧಿಸಿದಾಗ ಪರಿಹಾರ ನೀಡಲು ತೋಟಗಾರಿಕೆಯ ಸರ್ವೆ ಅಗತ್ಯ, ಮೈಲುತುತ್ತು ಔಷಧಿಗೆ ಸಬ್ಸಿಡಿ ಪಡೆಯಲು ಇಲಾಖೆ ನೆರವು ಬೇಕು. ಇದಕ್ಕಾಗಿ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೇಕು. ಆದರೆ ತೋಟಗಾರಿಕಾ ಇಲಾಖೆಯತ್ತ ಗಮನಿಸಿದರೆ ಇಲ್ಲಿ ಅಧಿಕಾರಿಗಳೂ ಇಲ್ಲ.. ಸಿಬ್ಬಂದಿಗಳೂ ಇಲ್ಲ. ಖಾಲಿ ಚೇರ್ ಗಳ ಇಲಾಖೆಯಾಗಿ ಪರಿಣಮಿಸಿದೆ.

ತೋಟಗಾರಿಕಾ ಇಲಾಖೆಯಲ್ಲಿ ಕ್ಷೇತ್ರ ವೀಕ್ಷಣೆ ಗೆ(ಫೀಲ್ಡ್) ಒಟ್ಟು ೭ ಮಂದಿ ಅಧಿಕಾರಿಗಳು ಬೇಕಾಗಿದ್ದು, ಇದರಲ್ಲಿ ಒಬ್ಬನೇ ಒಬ್ಬ ಅಧಿಕಾರಿಯೂ ಇಲ್ಲ. ಎಲ್ಲಾ ಹುದ್ದೆಗಳು ’ಖಾಲಿ’ ಯಾಗಿವೆ. ಪುತ್ತೂರು ತಾಲೂಕಿನ ತೋಟಗಾರಿಕಾ ಇಲಾಖೆಯಲ್ಲಿ ಒಟ್ಟು ೧೪ ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇರಬೇಕು. ಆದರೆ ಪ್ರಸ್ತುತ ಇಲ್ಲಿರುವುದು ಕೇವಲ ೫ ಮಂದಿ ಮಾತ್ರ. ಈ ಇಲಾಖೆಯಲ್ಲಿ ಶೇ. ೭೦ ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ತೋಟಗಾರಿಕೆ ಇಲಾಖೆಯ ನಿರೀಕ್ಷಿತ ಪ್ರಗತಿಗೆ ತೊಡಕಾಗಿ ಪರಿಣಮಿಸಿದೆ.

ಪುತ್ತೂರು ತೋಟಗಾರಿಕೆ ಇಲಾಖೆಯಲ್ಲಿ ಹಿರಿಯ ತೋಟಗಾರಿಕಾ ನಿರ್ದೇಶಕರು ಹುದ್ದೆಯ ಅಧಿಕಾರಿ ಕರ್ತವ್ಯದಲ್ಲಿದ್ದಾರೆ. ಒಂದು ಸಹಾಯಕ ತೋಟಗಾರಿಕಾ ನಿರ್ದೇಶಕರ ಹುದ್ದೆ ಭರ್ತಿಯಾಗಿಲ್ಲ. ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳು ೪ ಮಂಜೂರಾಗಿದ್ದು, ಪ್ರಸ್ತುತ ಎರಡು ಹುದ್ದೆ ಮಾತ್ರ ಭರ್ತಿಯಾಗಿದೆ. ಪುತ್ತೂರು ಹಾಗೂ ಉಪ್ಪಿನಂಗಡಿ ಹೋಬಳಿಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರೆ, ಉಳಿದೆರಡು ಹುದ್ದೆಗಳು ಖಾಲಿಯಾಗಿವೆ. ೧ ಕಚೇರಿ ಮೇಲ್ವಿಚಾರಕ ಹಾಗೂ ೧ ಪ್ರಥಮ ದರ್ಜೆ ಸಿಬಂದಿ ಹುದ್ದೆ ಭರ್ತಿಯಾಗಿದ್ದು, ದ್ವಿತೀಯ ದರ್ಜೆ ಸಿಬಂದಿಯನ್ನು ಬೆಳ್ತಂಗಡಿಯ ತೋಟಗಾರಿಕಾ ಇಲಾಖೆಗೆ ನಿಯೋಜನೆ ಮಾಡಲಾಗಿದೆ.

ಅಟೆಂಡರ್ ಹುದ್ದೆ, ಜೇನು ಪ್ರದರ್ಶಕರ ಹುದ್ದೆ ಖಾಲಿಯಾಗಿದೆ. ತೋಟಗಾರಿಕಾ ಸಹಾಯಕರ ಹುದ್ದೆ ೩ ಇರಬೇಕಾಗಿದ್ದು, ಈ ಎಲ್ಲಾ ಹುದ್ದೆಗಳು ಖಾಲಿಯಾಗಿವೆ. ಉಳಿದಂತೆ ಎರಡು ಮಂದಿ ಗುತ್ತಿಗೆ ಆಧಾರದಲ್ಲಿ ತೋಟಗಾರಿಕಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವು ಕೊರತೆಗಳ ನಡುವೆಯೂ ಪ್ರಸ್ತುತ ತೋಟಗಾರಿಕಾ ಇಲಾಖೆಯಲ್ಲಿ ಕೃಷಿಕರಿಗಾಗಿ ನೀಡಲು ೪ ಬಗೆಯ ಗಿಡಗಳನ್ನು ಬೆಳೆಸಲಾಗುತ್ತಿದೆ. ಗೇರು ಬೀಜ, ಪಪ್ಪಾಯಿ, ಕಾಳುಮೆಣಸು ಹಾಗೂ ನುಗ್ಗೆಕಾಯಿಯ ಸಸಿ ಗಿಡಗಳು ಇಲ್ಲಿ ಮಾರಾಟಕ್ಕಿವೆ. ಪ್ರತಿಯೊಂದು ಸುಮಾರು ೧೦ ಸಾವಿರದಷ್ಟು ಗಿಡಗಳನ್ನು ರೈತರಿಗಾಗಿ ಬೆಳೆಸಲಾಗಿದೆ. ಪ್ರಾರಂಭದಲ್ಲಿ ರೈತರು ಈ ಗಿಡಗಳನ್ನು ಹಣ ನೀಡಿ ಪಡೆದುಕೊಳ್ಳಬೇಕು. ನಂತರ ಆ ಹಣವನ್ನು ಇಲಾಖೆ ವತಿಯಿಂದ ರೈತರ ಬ್ಯಾಂಕ್ ಖಾತೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಹಿರಿಯ ತೋಟಗಾರಿಕಾ ನಿರ್ದೇಶಕಿ ರೇಖಾ ಬಿ.ಎಸ್ ತಿಳಿಸಿದ್ದಾರೆ.

ಕ್ಷೇತ್ರ ಭೇಟಿ ಮೂಲಕ ಕೆಲಸ ಮಾಡುವ ಹುದ್ದೆಗಳು ಖಾಲಿ ಇರುವುದರಿಂದ ತೋಟಗಾರಿಕೆ ಇಲಾಖೆಗೆ ಪ್ರಮುಖ ತೊಂದರೆಯಾಗಿರುವುದು ನಿಜ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ರೈತರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಕೆಲಸದತ್ತ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ-ರೇಖಾ ಬಿ.ಎಸ್ ಹಿರಿಯ ತೋಟಗಾರಿಕಾ ನಿರ್ದೇಶಕರು

 

 

 

By suddi9

Leave a Reply

Your email address will not be published. Required fields are marked *