ಮೂಡುಬಿದಿರೆ : ಆಳ್ವಾಸ್ನ ಸಮಾಜಕಾರ್ಯ ವಿಭಾಗ, ಮರೋಡಿ ಗ್ರಾಮ ಪಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾರಾವಿ ವಲಯ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್, ಮಾವಿನಕಟ್ಟೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಮರೋಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಹಿತ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಮರೋಡಿ ಗ್ರಾ.ಪಂನ ಸಮುದಾಯ ಭವನದಲ್ಲಿ ನಡೆಯುವ ಸಮುದಾಯ ಶಿಬಿರವು ಶುಕ್ರವಾರ ಆರಂಭಗೊಂಡಿತು.
ದ.ಕ ಜಿಲ್ಲಾ ಕೃಷಿಕ ಸಮಾಜ ಸಂಘದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ನಮ್ಮ ದೇಶವು ಯುವಜನರನ್ನು ಹೊಂದಿದ್ದು ಯಂಗ್ ನೇಶನ್ ಎಂಬ ಹೆಸರಿಗೆ ಪಾತ್ರವಾಗಿದೆ. ಹಳ್ಳಿಗಳಲ್ಲಿ ಶಿಬಿರಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರದೇಶದ ಜನರು, ಅವರ ಜೀವನ ಪದ್ಧತಿ ಹಾಗೂ ವಾತಾವರಣ ಪರಿಚಯವಾಗಲು ಸಹಕಾರಿಯಾಗುತ್ತದೆ. ಕೃಷಿಯಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಂಡಿರುವ ಯುವಜನತೆ ಇಂದು ಉದ್ಯೋಗಕ್ಕಾಗಿ ಪಟ್ಟಣದತ್ತ ಸಾಗುತ್ತಿದೆ. ದೇಶದಲ್ಲಿ ಯುವಕರಿಗೆ ಹಲವು ಅವಕಾಶಗಳಿವೆ. ಯುವಜನತೆ ತಮ್ಮ ಜೀವನದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಪೆರಾಡಿ ಪ್ರಾ.ಕೃ.ಸ.ಬ್ಯಾ.ನಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ ಧ್ವಜರೋಹಣವನ್ನು ನೆರವೇರಿಸಿದರು.
ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ರಾಜ್ ಅಧ್ಯಕ್ಷತೆಯನ್ನು ವಹಿಸಿ ಸಮಾಜಮುಖಿ ಕೆಲಸಗಳು ನಡೆಯಬೇಕಾದರೆ ಪರಸ್ಪರ ಸಹಕಾರ ಮನೋಭಾವ ಅಗತ್ಯ. ಉತ್ತಮ ಶಿಬಿರಗಳು ಹಳ್ಳಿಯೆಡೆಗೆ ಒಳ್ಳೆಯ ಮನಸಿನೆಡೆಗೆ ನಮ್ಮನ್ನು ಸಾಗಿಸುತ್ತವೆ ಎಂದು ಹೇಳಿದರು.
ಬೆಳ್ತಂಗಡಿ ಎಂಪಿಎಂಸಿ ಅಧ್ಯಕ್ಷ ಸತೀಶ.ಕೆ, ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಮರೋಡಿ ಗ್ರಾ.ಪಂ ಅಧ್ಯಕ್ಷ ಸದಾನಂದ ಶೆಟ್ಟಿ, ಪೆರಾಡಿ ಹಾ.ಉ.ಸ.ಸಂಘದ ಅಧ್ಯಕ್ಷ ಸಂಜೀವ ಶೆಟ್ಟಿ, ಪೆರಾಡಿ ಪ್ರಾ.ಕೃ.ಸ.ಬ್ಯಾ.ನಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್, ಮಾವಿನಕಟ್ಟೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಷ್ಣುಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಳ್ವಾಸ್ ಸಮಾಜಕಾರ್ಯ ಕಾಲೇಜಿನ ವಿಭಾಗದ ಮುಖ್ಯಸ್ಥೆ ಮಧುಮಾಲ, ವಿದ್ಯಾರ್ಥಿ ಸಂಯೋಜಕ ತೇಜಸ್ ಉಪಸ್ಥಿತರಿದ್ದರು. ಉಪನ್ಯಾಸಕಿ ಸಪ್ನ ಆಳ್ವ ಸ್ವಾಗತಿಸಿದರು. ಶಿಬಿರದ ಸಂಯೋಜಕಿ, ಉಪನ್ಯಾಸಕಿ ಪವಿತ್ರಾ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಚರಣ್ರಾಜ್ ಮತ್ತು ಅಂಕಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಿಬಿರಾರ್ಥಿಗಳಿಂದ ಶಾಲಾ ಮಕ್ಕಳಿಗಾಗಿ ಮಾಹಿತಿ ಶಿಕ್ಷಣ ಕಾರ್ಯಕ್ರಮ-ಸ್ಪರ್ಶ ಸಂಹಿತೆ ನಡೆಯಿತು.
