mrpl3-384x216-1151388880

ಜೋಕಟ್ಟೆ: ಎಂಆರ್ ಪಿಎಲ್ ಕಂಪನಿಗಳು  ನೆಲ ಜಲಗಳನ್ನು ಮಲಿನಗೊಳಿಸಿದಲ್ಲದೆ, ಉದ್ಯೋಗ ಸೃಷ್ಟಿಸದೆ ಯುವಕರನ್ನು ವಂಚಿಸಿದೆ ಎಂದು ನಾಗರಿಕ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.

ಸರಕಾರದ ಆದೇಶದ ವಿರುದ್ಧವಾಗಿ ಎಂಆರ್ ಪಿಎಲ್ ನಡೆಯುತ್ತಿದ್ದು, ಕಂಪೆನಿಗೆ ಬೀಗ ಜಡಿಯಲು ಒತ್ತಾಯಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ, ಎಂಆರ್ ಪಿಎಲ್ ವಿರೋಧಿ ಸಮಿತಿ ಸುರತ್ಕಲ್ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಎಂಆರ್ ಪಿಎಲ್ ಪ್ರಧಾನ ದ್ವಾರದ ಮುಂಭಾಗ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯನ್ನುದ್ದೇಶಿಸಿ ಅವರು ಮಾತಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವಾ ತಮ್ಮ ಹಿಂಬಾಲಕರ ಮೂಲಕ ಕಂಪೆನಿಯ ಗುತ್ತಿಗೆ ಹಿಡಿಯುವುದರಲ್ಲಿ ಮುಳುಗಿ ಹೋಗಿದ್ದಾರೆ. ಇಲ್ಲಿನ ಇಂತಹ ಸ್ಥಿತಿಗೆ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳು ಬಂಡವಾಳಶಾಹಿ ಕಂಪೆನಿಗಳ ಜತೆಗೆ ಶಾಮೀಲಾಗಿರುವುದೇ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.

ಎಂಆರ್ ಪಿಎಲ್ ಕಂಪನಿಗಳಿಂದ ಇಂದು ಉದ್ಯೋಗದ ಕನಸುಗಳು ಕಮರಿಹೋಗಿವೆ. ಹಂತ ಹಂತವಾಗಿ ವಿಸ್ತರಣೆಗೊಳ್ಳುತ್ತಿರುವ ಕಂಪೆನಿ ನಾಲ್ಕನೇ ಹಂತದ ಅಕ್ರಮ ಭೂಸ್ವಾಧೀನಕ್ಕೆ ಸರಕಾರಿ ಯಂತ್ರವನ್ನು ಬಳಸುತ್ತಿದೆ‌. ಇದನ್ನು ಪ್ರತಿಭಟಿಸಿದ ಪೆರ್ಮುದೆಯ ರೈತರ ಮೇಲೆ ಜಾಮೀನುರಹಿತ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಇದು ಖಂಡನೀಯ. ಜೋಕಟ್ಟೆ ಭಾಗದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸರಕಾರ ಹೊರಡಿಸಿದ ಆದೇಶವನ್ನು ಕಂಪೆನಿ ಪಾಲಿಸದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಧರಣಿಯಲ್ಲಿ ಡಿವೈಎಫ್ ಐ  ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ಹೋರಾಟ ಸಮಿತಿಯ ಮುಖಂಡ ಅಬೂಬಕ್ಕರ್ ಬಾವ, ಶ್ರೀನಾಥ್ ಕುಲಾಲ್, ಶ್ರೀನಿವಾಸ ಹೊಸಬೆಟ್ಟು, ಇಕ್ಬಾಲ್ ಜೋಕಟ್ಟೆ, ಶೇಖರ್ ಅಂಚನ್ ನಿರ್ಮುಂಜೆ, ಸಿಲ್ವಿಯಾ, ಯಮುನಾ, ಅಮೀನಮ್ಮ, ಭವಾನಿ, ಮಕ್ಸೂದ್, ಅಜ್ಮಲ್ ಅಹ್ಮದ್, ಸುಲೋಚನಿ, ಕವಿತಾ ಜೋಕಟ್ಟೆ, ಸುರೇಂದ್ರ ಜೋಕಟ್ಟೆ ಮತ್ತಿತರರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *