ಸುದ್ದಿ 9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಮೀನು ಸಾಗಾಟದ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರಾವಸ್ಥೆ ತಲುಪಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗಿನ ಜಾವ 8.25ರ ಸುಮಾರಿಗೆ ಗುರುಪುರದಲ್ಲಿ ಸಂಭವಿಸಿದೆ. ಗುರುಪುರದ ಕಡಿದಾದ ರಸ್ತೆಯಿಂದಾಗಿ ಇಲ್ಲಿ ಅಪಘಾತ ಹೆಚ್ಚಾಗುತ್ತಲೇ ಬರುತ್ತಿದ್ದು, `ಗುರುಪುರ ಡೇಂಜರಸ್ ಸ್ಫಾಟ್ ಆಗಿ ಮಾರ್ಪಟ್ಟಿದೆ.. ಘಟನೆಯಿಂದ ಜನರಿಂದ ಆಕ್ರೋಶ ಭುಗಿಲೆದ್ದಿದ್ದು ಘಟನೆಗೆ ಕಾರಣವಾದ ಈಚರ್ ಲಾರಿಯನ್ನು ಪಡಿಗಟ್ಟಿದ್ದು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದಾರೆ. ಮೃತ ಬಾಲಕನನ್ನು ಗುರುಪುರ ವ್ಯವಸಾಯ ಸೇವಾ ಬ್ಯಾಂಕ್ ಬಳಿಯ ರಾಜೇಂದ್ರ ಪೂಜಾರಿ ಹಾಗೂ ಜ್ಯೋತಿ ಎಂಬವರ ಮಗ ರೋಹಿತ್(7) ಎಂದು ಗುರುತಿಸಲಾಗಿದೆ. ಈತ ಗುರುಪುರ ಕೈಕಂಬದ ಪಾಂಪೆ ಇಂಗ್ಲೀಷ್ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ. ಘಟನೆಗೆ ಕಾರಣವಾದ ಈಚರ್ ಲಾರಿ ಚಾಲಕ ತಪ್ಪಿಸಿಕೊಂಡಿದ್ದಾನೆ. ಮಂಗಳೂರಿನಿಂದ ಮೂಡಬಿದ್ರೆಗೆ ತೆರಳುವ ವಾಹನಗಳು ರಸ್ತೆಯಲ್ಲೇ ಬಾಕಿ ಬಿದ್ದಿದ್ದು ಬಂದ್ ಆವರಿಸಿದೆ.


ಘಟನೆಯ ವಿವರ: ಗುರುವಾರ ಬೆಳಗ್ಗಿನ ಜಾವ ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕ ಬೆನ್ನಿಗೆ ಬ್ಯಾಗ್ ಹೇರಿಕೊಂಡು ಗುರುಪುರದ ರಸ್ತೆಯ ಬದಿಯಲ್ಲಿ ತನ್ನ ಅಮ್ಮನ ಕೈ ಹಿಡಿದು ಹೋಗುತ್ತಿದ್ದ ಬಾಲಕ ಸ್ವಲ್ಪ ಮುಂದಕ್ಕೆ ಹೋಗಲಾರಂಭಿಸಿದ. ಈ ವೇಳೆ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಬಂದ ಈಚರ್ ಲಾರಿ ರಸ್ತೆಯ ಬದಿಯಲ್ಲಿದ್ದ ಬಾಲಕನಿಗೆ ಈಚರ್ನ ಮಧ್ಯಭಾಗ ಸಿಕ್ಕಿಕೊಂಡು ಅದರ ಇಂಜಿನ್ಗೆ ಬಾಲಕನ ತಲೆ ಬಡಿದ ಪರಿಣಾಮ ಬಾಲಕನ ತಲೆಗೆ ಗಂಭೀರ ಏಟು ಬಿದ್ದಿದೆ ಎನ್ನಲಾಗಿದೆ. ಬಾಲಕ ಹೇರಿಕೊಂಡು ಹೋಗುತ್ತಿದ್ದ ಬ್ಯಾಗ್ ಲಾರಿಯ ಮಧ್ಯ ಭಾಗಕ್ಕೆ ಸಿಕ್ಕಿಕೊಂಡಿದೆ. ತಕ್ಷಣ ಗುರುಪುರದ ರಫೀಕ್ ಎಂಬವರು ತನ್ನ ಜೀಪ್ನಲ್ಲಿ ಗಾಯಾಳು ಬಾಲಕನನ್ನು ಹಿಡಿದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈಚರ್ ಲಾರಿ ಪುಡಿಪುಡಿ: ಘಟನೆಯಿಂದ ವ್ಯಘ್ರಗೊಂಡಿದ್ದ ಸ್ಥಳೀಯರು ಘಟನೆಗೆ ಕಾರಣನಾದ ಈಚರ್ ಲಾರಿಯ ಗ್ಲಾಸನ್ನು ಪುಡಿಪುಡಿ ಮಾಡಿ ಹಾನಿಗೆಡವಿದ್ದಾರೆ. ಅಲ್ಲದೆ ಪೊಲೀಸರ ಹಾಗೂ ಆಡಳಿತ ವರ್ಗದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೇಟ್ ಆಗಿ ಬಂದ ಬಜ್ಪೆ ಪೊಲೀಸರು: ಘಟನೆ ಬೆಳಗ್ಗಿನ ಜಾವ 8.25ರ ಹೊತ್ತಿಗೆ ಹೋಗಿತ್ತು. ಈ ಬಗ್ಗೆ ಬಜ್ಪೆ ಪೊಲೀಸರಿಗೆ ಸುದ್ದಿಯನ್ನೂ ಮುಟ್ಟಿಸಲಾಗಿತ್ತು. ಆದರೆ ಘಟನೆ ನಡೆದು ಸುಮಾರು ಒಂದು ಗಂಟೆಯ ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆಕ್ರೋಶಿತರು ನೀವ್ಯಾಕೆ ಇಷ್ಟು ತಡವಾಗಿ ಬಂದಿದ್ದೀರಿ ಎಂದು ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡಿದ್ದರು.
ಭುಗಿಲೆದ್ದ ಪ್ರತಿಭಟನೆ: ಘಟನೆಯಿಂದ ತೀವ್ರ ನೊಂದಿರುವ ಸ್ಥಳೀಯರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮೀಷನರ್ ಕೂಡಲೇ ಆಗಮಿಸಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ರಸ್ತೆಯನ್ನು ಬಂದ್ ಮಾಡಿ ಟೈರ್ಗೆ ಬೆಂಕಿ ಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯನ್ನು ಅಗೆಯಲು ಮುಂದಾದ ಸ್ಥಳೀಯರನ್ನು ಪೊಲೀಸರಿಗೆ ಸಮಧಾನ ಪಡಿಸುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು.
ರಸ್ತೆ ಮಧ್ಯೆ ಠಿಕಾಣಿ ಹೂಡಿದ ಪ್ರತಿಭಟನಾಕಾರರು: ಗುರುಪುರದಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಹಲವಾರು ಅಪಮೃತ್ಯು ಸಂಭವಿಸಿದೆ. ಇಲ್ಲಿನ ನಿಲ್ಲದ ಮರಣಮೃದಂಗದಿಂದಾಗಿ ಆಕ್ರೋಶಗೊಂಡಿರುವ ಇಲ್ಲಿನ ಸ್ಥಳೀಯರು ರಸ್ತೆ ಮಧ್ಯೆಯೇ ಠಿಕಾಣಿ ಹೂಡಿ ವಾಹನ ಸಂಚರಿಸದಂತೆ ನೋಡಿಕೊಂಡರು. ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ತೀವ್ರತೆಯನ್ನು ಪಡೆದುಕೊಂಡಿದ್ದು ಪ್ರತಿಭಟನಾಕಾರರು ಆಡಳಿತ ಹಾಗೂ ಪೊಲೀಸರ ಮೇಲೆ ಧಿಕ್ಕಾರದ ಸುರಿಮಳೆಯನ್ನೇಗೈದಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಧಾನ ಪಡಿಸಲು ಯತ್ನಿಸಿದಾದರೂ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಪರಿಸ್ಥಿತಿ ಎದುರಾಗಿತ್ತು. ಆದರೆ ಬಜ್ಪೆ ಇನ್ಸ್ಪೆಕ್ಟರ್ ನರಸಿಂಹ ಮೂತರ್ಿ ಆಕ್ರೋಶಿತರನ್ನು ಸಮಧಾನಪಡಿಸಿದರಾದರೂ ಅವರ ಸುತ್ತ ಘೇರಾವ್ ಹಾಕಿದ್ದಾರೆ.
ಡಿ.ಸಿ. ಸ್ಥಳಕ್ಕೆ ಬರಲಿ: ಘಟನೆಯ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕಾಗಮಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಮಧ್ಯಾಹ್ನದ ವೇಳೆಗಾದರೂ ಜಿಲ್ಲಾಧಿಕಾರಿ ಆಗಮಿಸದೇ ಇದ್ದುದರಿಂದ ಪ್ರತಿಭಟನಾನಿರತರು ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಮಂಗಳೂರು ತಹಶೀಲ್ದಾರ್ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ತಹಶೀಲ್ದಾರ್ ಮಾತಿಗೂ ಜಗ್ಗದ ಪ್ರತಿಭಟನಾ ನಿರತರು ಡಿ.ಸಿ ಬರದೆ ಸುಮ್ಮನಿರೆವು ಎಂದು ಧಿಕ್ಕಾರದ ಸುರಿಮಳೆಗೈದಿದ್ದಾರೆ.
ಒಂದು ವಾರದೊಳಗೆ ರಸ್ತೆ ಅಗಲೀಕರಣಗೊಳ್ಳಲಿ: ಗುರುಪುರದಲ್ಲಿ ಮತ್ತೆ ಮತ್ತೆ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಈ ರಸ್ತೆಯನ್ನು ಕೂಡಲೇ ಅಗಲೀಕರಣಗೊಳಿಸಬೇಕು. ಇಲ್ಲಿ ಅನೇಕ ಅಪಘಾತ ಸಂಭವಿಸಿದ್ದರೂ ನೀವ್ಯಾರೂ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ ಅಪಘಾತವಾಗಿದೆ ನಾವು ಎಷ್ಟು ಅಮಾಯಕರನ್ನು ಕಳೆದುಕೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದಾಗ ಮಂಗಳೂರು ಎಸ್.ಪಿ ಕೆವಿ ಜಗದೀಶ್, ಮಂಗಳೂರು ತಹಶೀಲ್ದಾರ್ ಅವರಿಗೆ ಪ್ರತಿಭಟನಾಕಾರರಿಗೆ ಏನೆಂದು ಉತ್ತರಿಸುವುದು ಎಂದು ತಿಳಿಯಲಿಲ್ಲ.
ಸ್ಥಳಕ್ಕಾಗಮಿಸಿದ ಮಂಗಳೂರು ಡಿ.ಸಿ.: ಪ್ರತಿಭಟನಾಕಾರರು ಕೊನೆವರೆಗೂ ಮಂಗಳೂರು ಡಿಸಿ ಎ.ಬಿ ಇಬ್ರಾಹಿಂ ಸ್ಥಳಕ್ಕಾಗಮಿಸಲೇ ಇಲ್ಲ. ಕೊನೆಗೆ ಮಂಗಳೂರಿನ ತಹಶೀಲ್ದಾರ್ ಅವರೇ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತಾಡಿದರು.
ವಜ್ರದೇಹಿ ಘಟನಾ ಸ್ಥಳಕ್ಕೆ ಭೇಟಿ: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರನ್ನು ಸಾಂತ್ವಾನಗೈದರು. ಸ್ವಾಮೀಜಿಗಳ ನುಡಿಕೇಳಿ ಸಮಧಾನಗೊಂಡ ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಿಲ್ಲಿಸಲು ಮುಂದಾದರು. ಕೊನೆಗೆ ಸ್ವಾಮೀಜಿ ತಹಶೀಲ್ದಾರ್ ಅವರಲ್ಲಿ ಗುರುಪುರ ರಸ್ತೆಗೆ ಕೂಡಲೇ ಕಾಯಕಲ್ಪ ಒದಗಿಸಬೇಕು ಎಂದು ಕೇಳಿಕೊಂಡರು.
ತಹಶೀಲ್ದಾರ್ ಭರವಸೆ: ಇಂದಿನಿಂದ 15 ದಿನಗಳೊಳಗಾಗಿ ಗುರುಪುರ ರಸ್ತೆಗೆ ಹಂಪ್ ನಿಮರ್ಾಣ, ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದಾಗ ಸ್ವಾಮೀಜಿ ನಾಳೇಯೇ ಕ್ರಮಕೈಗೊಳ್ಳಿ ಎಂದು ಸೂಚಿಸಿದಾಗ ಮಾತು ಬದಲಿಸಿದ ತಹಶೀಲ್ದಾರ್ ನಾಳೆಯಿಂದಲೇ ರಸ್ತೆಗೆ ಅಲ್ಲಲ್ಲಿ ಹಂಪ್ ನಿಮರ್ಿಸುತ್ತೇವೆ. ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಇದೇ ರಸ್ತೆಯಲ್ಲಿ ಪಾದಾಚಾರಿಗಳಿಗೆ ಹೋಗುವಂತಾಗಲು ಫುಟ್ಪಾತ್ ನಿಮರ್ಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಇನ್ನು ಮಳೆಗಾಲ ಆಗಿರುವುದರಿಂದ ಇದು ಭರವಸೆಯಾಗಿ ಉಳಿಯಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೌಜನ್ಯಕ್ಕೂ ಭೇಟಿ ನೀಡದ ಮೊಯ್ದೀನ್ ಬಾವಾ:
ಗುರುಪುರದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದರೂ ಇಲ್ಲಿನ ಶಾಸಕ ಮೊಯ್ದೀನ್ ಬಾವಾ ಸೌಜನ್ಯಕ್ಕಾದರೂ ಭೇಟಿ ನೀಡಲಿಲ್ಲ. ಗುರುಪುರದಲ್ಲಿ ಇದುವರೆಗೆ ಎರಡು ಭೀಕರ ಅಪಘಾತ ಸಂಭವಿಸಿದ್ದು ಅದರಲ್ಲಿ ಒಟ್ಟು ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರರು. ಆದರೆ ಶಾಸಕರು ಇದುವರೆಗೆ ಭೇಟಿ ನೀಡಿಲ್ಲ ಅಷ್ಟೇ ಅಲ್ಲದೆ ರಸ್ತೆ ಅಗಲೀಕರಣಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಇಲ್ಲಿನ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಯ್ದೀನ್ ಬಾವಾ ಮೊಬೈಲ್ ನಾಟ್ರೀಚೇಬಲ್: ಮೊಯ್ದೀನ್ ಬಾವಾ ಅವರ ಮೊಬೈಲ್ಗೆ ಕರೆ ಮಾಡಿದಾಗ ಅವರ ಮೊಬೈಲ್ ನಾಟ್ರೀಚೇಬಲ್ ಆಗಿತ್ತು. ಅಲ್ಲದೆ ಅವರ ಮೊಬೈಲ್ ರಿಂಗೆಣಿಸುತ್ತಿದ್ದರೂ ಬಾವಾ ಯಾವುದೇ ಕರೆಗೆ ಉತ್ತರಿಸಲಿಲ್ಲ.
ಗುರುಪುರಕ್ಕೆ ಇನ್ನೆಷ್ಟು ಬಲಿ?
ಕಳೆದ ವರ್ಷ 2013ರ ಡಿ. 26ರಂದು ತೈಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರೊಂದು ಬದಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದ ಪರಿಣಾಮ ಸತ್ಯದೇವತಾ ಮಂದಿರಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಕಾಸರಗೋಡಿನ ಸುನೀತಾ ಕಾಮತ್ ಎಂಬವರು ಸ್ಥಳದಲ್ಲೇ ಮೃತಪಟ್ಟರೆ ಪಾದಾಚಾರಿ ಮಹಿಳೆ ರಾಧಾ ಹೆಗ್ಡೆ ಎಂಬವರು ಗಂಭೀರ ಗಾಯಗೊಂಡಿದ್ದರು. ಇದೇ ವರ್ಷ ಎಪ್ರಿಲ್ 16ರಂದು ಟಿಪ್ಪರ್ ಚಾಲಕನ ಅವಾಂತರಕ್ಕೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಸಂಬಂಧಿಯಾದ ಎರಡೂವರೆ ವರ್ಷದ ಬಾಲಕಿ ಹಷರ್ಿತಾ ಹಾಗು ಹದಿನೆಂಟು ವರ್ಷದ ಬಾಬು ಎಂಬವರು ದಾರುಣ ಅಂತ್ಯ ಕಂಡಿದ್ದರು. ಈ ಪೈಕಿ ಜಸ್ವಿನ್ದಾರ್(32) ಹಾಗೂ ದೀಪಕ್(40) ಎಂಬವರು ಗಂಭೀರ ಗಾಯಗೊಂಡಿದ್ದರು. ಇವರು ಉತ್ತರಾಖಾಂಡದ ಮೂಲದವರಾಗಿದ್ದಾರೆ. ಕಳೆದ ವರ್ಷ ಮೇ 4ರಂದು ಜೀಪ್ ಮತ್ತು ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿ ಅವನೀಲ್ ಪಾಸ್ ಎಂಬ ನಾಲ್ಕರ ಹರೆಯದ ಬಾಲಕ ಸ್ಥಳದಲ್ಲೇ ಮೃತಪಟ್ಟರೆ ಹಾಗೂ ಆತನ ತಾಯಿ ಗಂಭೀರ ಗಾಯಗೊಂಡಿದ್ದರು. ಇದೀಗ ರೋಹಿತ್ಗೆ ಡಿಕ್ಕಿ ಸಂಭವಿಸಿದ್ದು ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಖಾಸಗಿಯವರು ಜಾಗ ಕೊಟ್ಟರೆ….!
ರಾ.ಹೆ. 13 ಆಗಿದ್ದ ರಸ್ತೆ ಇದೀಗೆ ರಾ.ಹೆ. 169 ಆಗಿದೆ. ಆದರೆ ಹೆಸರು ಬದಲಾದರೂ ರಸ್ತೆ ಬದಲಾಗಲಿಲ್ಲ. ಇಲ್ಲಿನ ರಸ್ತೆ ಅಗಲ ಕಿರಿದಾಗಿದ್ದರಿಂದ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇನ್ನೂ ಹಳೆಕಾಲದ ಪಳಿವಳಿಕೆಯಂತಿರುವ ಈ ರಸ್ತೆ ಅಗಲಕಾಣದ್ದು ಆಡಳಿತ ವರ್ಗದವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಹಳೆಕಾಲದ ಕಟ್ಟಡಗಳು ಹಾಗೂ ಖಾಸಗಿಯವರು ಮನೆ ಮಾಡಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ ಸಾಕಷ್ಟು ಪರಿಹಾರ ಧನ ನೀಡಿ ರಸ್ತೆ ಅಗಲೀಕರಣಗೊಳಿಸಿದರೆ ಇಲ್ಲಿ ನಡೆಯುವ ಅಪಘಾತಕ್ಕೆ ಮುಕ್ತಿ ಸಿಗಬಹುದು.














