ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖಾಧಿಕಾರಿಗಳು ಸೋಮವಾರ ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಒಟ್ಟು 1,450.340 ಲೀಟರ್ ಮದ್ಯ ಹಾಗೂ ಇದಕ್ಕೆ ಬಳಸಿದ್ದ ಎರಡು ಕಾರು ವಶಪಡಿಸಿಕೊಂಡಿದ್ದು,ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಲಾದ ಮದ್ಯ ಹಾಗೂ ಕಾರುಗಳ ಮೌಲ್ಯ ಸುಮಾರು 20.37 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಆರೋಪಿಗಳಾದ ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಹಾಗೂ ಮಹಮ್ಮದ್ ಶಾಫಿನ್ ಎಂಬವರನ್ನು ಬಂಧಿಸಿ ಮುಂದಿನ ಕ್ತಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಮಂಗಳವಾರ ಬಂಟ್ವಾಳ ಅಬಕಾರಿ ಇಲಾಖಾ ಕಚೇರೊಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಾಳ್ತಿಲದಲ್ಲಿ 7.72 ಲಕ್ಷ ಮೌಲ್ಯದ
ಗೋವಾ ಮದ್ಯ ಜಪ್ತಿ :-

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿ ಎಂಬಲ್ಲಿ ಅಮಿತ್ ಎಂಬವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬಾತ ಸೇರಿಕೊಂಡು ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ದಾಸ್ತಾನಿಟ್ಟಿರುವ ಕುರಿತು ದೊರೆತ ಖಚಿತ ವರ್ತಮಾನದ ಮೇರೆಗೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಸಿ. ಜಗದೀಶ್ ಅವರ ನಿರ್ದೇಶನದಂತೆ ಉಪ ಆಯುಕ್ತೆ ಬಿಂದುಶ್ರೀ ಪಿ.,ಅವರ ಮಾರ್ಗದರ್ಶನದಲ್ಲಿ,ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಸಂತೋಷ್ ಮೊಡಗಿ, ಗಾಯತ್ರಿ ಸಿ.ಎಚ್.,ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕರಾದ ಲಕ್ಷ್ಮಣ್ ಶಿವಣಗಿ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ನಡೆಸಿದಾಗ ಸುಮಾರು 146 ಪೆಟ್ಟಿಗೆಗಳಲ್ಲಿಅಕ್ರಮವಾಗಿ ದಾಸ್ತಾನಿಟ್ಟಿದ್ದ ಒಟ್ಟು 1,261.440 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ತಕ್ಷಣ ವಶಪಡಿಸಿಕೊಳ್ಳಲಾಗಿದ್ದು ,ಇದರ ಒಟ್ಟು ಮೌಲ್ಯ 7.72 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ಕಲ್ಲಡ್ಕದಲ್ಲಿ ಕಾರ್ಯಾಚರಣೆ; ಕಾರಿನಲ್ಲಿ ಮದ್ಯ ಸಾಗಾಟ ಪತ್ತೆ:–
ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ದೊರೆತ ಮತ್ತೊಂದು ಮಾಹಿತಿಯಾಧಾರದಲ್ಲಿ ಕೇರಳ ರಾಜ್ಯದ ನೋಂದಣಿಯ ಎರಡು ಕಾರುಗಳಲ್ಲಿ ಅಕ್ರಮವಾಗಿ ಕೇರಳಕ್ಕೆ ಮದ್ಯ ಸಾಗಾಟ ಮಾಡುತ್ತಿರುವುದನ್ನು ರಾ.ಹೆ.ಯ ಕಲ್ಲಡ್ಕದಲ್ಲಿ ಅಬಕಾರಿ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಅಬಕಾರಿ ಇಲಾಖಾಧಿಕಾರಿಗಳು ಮಾಹಿತಿಯನ್ವಯ ಕಲ್ಲಡ್ಕದಲ್ಲಿ ಹೊಂಚು ಹಾಕಿ ನಿಂತಿದ್ದ ವೇಳೆ ಕೇರಳ ರಾಜ್ಯದ ನೊಂದಣಿ ಹೊಂದಿದ್ದ ಕೆಎಲ್-56-ಆರ್-2927 ಬಿಳಿ ಮತ್ತು ಕಪ್ಪು ಬಣ್ಣದ ಹುಂಡೈ ಐ20 ಕಾರು ಹಾಗೂ ಕೆಎಲ್-14-ಎಚ್ -7061ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ವಾಡಿ ಕಾರುಗಳೆರಡನ್ನು ಅನುಮಾನದಿಂದ ತಡೆದು ಪರಿಶೀಲಿಸಿದಾಗ 24 ಪೆಟ್ಟಿಗೆಗಳಲ್ಲಿ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.ಕೂಡಲೇ ಕಾರಿನಲ್ಲಿದ್ದ ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಹಾಗೂ ಮಹಮ್ಮದ್ ಶಾಫಿನ್ ಎಂಬವರನ್ನು ವಶಪಡಿಸಿ ವಿಚಾರಣೆಗೊಳಪಡಿಸಿದಾಗ ಗೋವಾ ರಾಜ್ಯದ ಮದ್ಯವನ್ನು ಕೇರಳಕ್ಕೆ ಅಕ್ರಮವಾಗಿ ಸಾಗಿಸುವುದನ್ನು ಬಾಯಿಬಿಟ್ಟಿದ್ದಾರೆ.ತಕ್ಷಣ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ವಶಪಡಿಸಲಾದ ಮದ್ಯಹಾಗೂ ಸಾಗಾಟಕ್ಕೆ ಬಳಸಿದ ಎರಡೂ ಕಾರುಗಳ ಮೌಲ್ಯ 12.65 ಲ.ರೂ.ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದು,ಮುಂದಿನ ತನಿಕಕೆ ನಡೆಯುತ್ತಿದೆ.
ಅಬಕಾರಿ ಉಪನಿರೀಕ್ಷಕರಾದ ಅಭಿಷೇಕ್ ಬೋರಕರ್, ವಿಶಾಲ್ ನಾಯಕ್, ಸಿಬ್ಬಂದಿಗಳಾದ ಪ್ರಕಾಶ್ , ದೊಡ್ಡಪ್ಪ ಹಾಗೂ ವಾಹನ ಚಾಲಕ ಧೀರಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಅಬಕಾರಿ ಇಲಾಖಾಧಿಕಾರಿಗಳ ತಂಡವು ಹೆಜಮಾಡಿ ಟೋಲ್ ಬಳಿ ಗೋವಾ ರಾಜ್ಯದ ಮದ್ಯವನ್ನು ವಶಪಡಿಸಿಕೊಂಡ ಬಳಿಕ ಇದೀಗ ಸೋಮವಾರ ಸಿನಿಮಾ ಶೈಲಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ಯಶಸ್ವಿ ಕಾರ್ಯಾಚರಣೆಯಾಗಿದೆ ಎಂದು ಉಪ ಆಯುಕ್ತೆ ಬಿಂದುಶ್ರೀ ಪಿ.,ಅವರು ತಿಳಿಸಿದ್ದಾರೆ.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ತಂದು ದಾಸ್ತಾನು ಮಾಡುವುದು ಹಾಗೂ ಇತರ ರಾಜ್ಯಗಳಿಗೆ ಸಾಗಾಟ ಮಾಡುವ ಅಕ್ರಮ ಚಟುವಟಿಕೆಗಳ ವಿರುದ್ಧ ದಕ್ಷಿಣ ಕನ್ನಡ ಅಬಕಾರಿ ಇಲಾಖೆ ನಿರಂತರ ನಿಗಾ ವಹಿಸಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
