ರಾಜ್ಯೋತ್ಸವ ಪ್ರಶಸ್ತಿ- ಹೈಕೋರ್ಟ್ ಆದೇಶ ಪರಿಗಣಿಸದ ಸರ್ಕಾರ :ಹಿರಿಯ ಸಾಹಿತಿ ಬಿ.ವಿ. ಸತ್ಯನಾರಾಯಣ ರಾವ್
ಬೆಂಗಳೂರು: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಿದ್ದು, ಹೈಕೋರ್ಟ್ ಆದೇಶದಂತೆ ತಮ್ಮ ಹೆಸರನ್ನು ಪರಿಗಣಿಸುವಂತೆ ಹಿರಿಯ ಸಾಹಿತಿ ಬಿ. ವಿ. ಸತ್ಯನಾರಾಯಣ ರಾವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ತಾವು ರಚಿಸಿರುವ 108 ಸಾಹಿತ್ಯ ಕೃತಿಗಳನ್ನು ಮುಂದಿಟ್ಟುಕೊಂಡು ನವೆಂಬರ್ 1 ರಂದು ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಗರದ ರವೀಂದ್ರ ಕಲಾಕ್ಷೇತ್ರದ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಹೈಕೋರ್ಟ್ ಆದೇಶ (WP 50439/ 2019 ರ)ದ ಉಲ್ಲಂಘನೆಯಾಗಿದ್ದು, ತಮ್ಮ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಕೃತಿಗಳನ್ನು ರಚಿಸಿರುವ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅನೇಕ ಸಾಧನೆ ಮಾಡಿದ್ದರೂ ಸಹ ನನ್ನನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸದ ಕಾರಣ ಉಚ್ಚ ನ್ಯಾಯಾಲಯದಲ್ಲಿ 2013 ರಿಂದ ನಾಲ್ಕು ಸಲ ಆದೇಶ ಪಡೆದರೂ ಸಹ ನನ್ನನ್ನು ಪ್ರಶಸ್ತಿಗೆ ಪರಿಗಣಿಸದಿರುವುದು ಕನ್ನಡ ಕಾವ್ಯಸಾಧಕನಾದ ನನಗೆ ತೀವ್ರ ವಿಷಾದವಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಾರ್ಶ್ವವಾಯುವಿನ ಸಮಸ್ಯೆ ಹೊಂದಿರುವ ತಾವು ಕನ್ನಡ ಕಾವ್ಯಕ್ಕಾಗಿ ಜೀವನವನ್ನು ಮುಡುಪಿಟ್ಟು ಕೆಲಸ ಮಾಡುತ್ತಿದ್ದೇನೆ. ನನ್ನ ಕಾವ್ಯಸಾಧನೆಗಳನ್ನು ಪರಿಗಣಿಸಿ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎಂದು ಅವರು ಕೋರಿದ್ದಾರೆ. ನಾನು ಮೂಲತಃ ಮ್ಯಾಕಾನಿಕಲ್ ಇಂಜಿನಿಯರ್, ಕೆಇಬಿಯಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ಅರ್ಹತೆ ಇದ್ದರೂ ಪ್ರಶಸ್ತಿಗೆ ನನ್ನನ್ನು ಕಡೆಗಣಿಸಲಾಗಿದೆ ಎಂದು 75 ವರ್ಷ ವಯಸ್ಸಿನ ಬಿ.ವಿ. ಸತ್ಯನಾರಾಯಣರಾವ್ (ಕಾವ್ಯನಾಮ ಸತ್ಯವಿಠಲ) ಬೇಸರ ವ್ಯಕ್ತಪಡಿಸಿದ್ದಾರೆ
ತಮ್ಮ ಜೀವನವನ್ನು ಪ್ರಾಚೀನ ಕಾವ್ಯ ಪರಂಪರೆಯ ಪುನರುಜೀವನಕ್ಕಾಗಿ ಮುಡುಪಿಟ್ಟು ಅದನ್ನು ಸಾಧಿಸಿ ಕಾವ್ಯ ಪ್ರಕಟಣೆಗಾಗಿ 2005ರಲ್ಲಿ ಸ್ವಯಂನಿವೃತ್ತಿ ಪಡೆದು ನೂರಾರು ಕೃತಿಗಳನ್ನು ಈ ವರೆಗೆ ರಚಿಸಿದ್ದೇನೆ. ಹಾಲುಮತ ಮಹಾಕಾವ್ಯ, ಶ್ರೀ ಶಿವಕುಮಾರ ಸ್ವಾಮಿ ಗುರುಚರಿತ್ರೆ ಮೊದಲಾದ 13 ಭಾಮಿನಿ ಷಟ್ನದಿ ಕಾವ್ಯಗಳ ಸಾಧನೆ ಜೊತೆಗೆ ಡಾ. ಅಂಬೇಡ್ಕರ್ ಶತಕ, ವಿವೇಕಾನಂದ ಶತಕ ಮೊದಲಾದ 15 ಶತಕ ಕಾವ್ಯಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ.