ಕೈಕಂಬ : ಆತ್ಮಶುದ್ಧಿ ಹಾಗೂ ಶ್ರದ್ಧೆಯಿಂದ ಪ್ರಾರ್ಥಿಸಿಕೊಂಡಲ್ಲಿ ಕಲಿಯುಗದಲ್ಲೂ ದೈವ, ದೇವರು ಭಕ್ತರ ಕಷ್ಟ ಪರಿಹರಿಸುತ್ತಾನೆ ಎಂಬ ಎಂಬ ನಂಬಿಕೆಯಂತೆ, ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಕೇರಳ ಮೂಲದ ಕುಟುಂಬವೊಂದರ ಆರೋಗ್ಯ ಸಮಸ್ಯೆಗೆ ನೆಮ್ಮದಿಯ ಫಲಿತಾಂಶ ಸಿಕ್ಕಿದೆ. ಪವಾಡ ಸದೃಶವೆನ್ನಲಾದ ಈ ವಿಷಯ ಈಗ ಊರಲ್ಲಿ ಭಾರೀ ಪ್ರಚಾರದಲ್ಲಿದೆ.

ಕೇರಳದ ಎರ್ನಾಕುಲಂನ ಉತ್ತರ ಪರೂರಿನ ಕುಮಾರ್ ಎಂಬವರ ಪತ್ನಿಯ ಹಿರಿ ಸಹೋದರಿ ಮಾಯಾ ಎಂಬವರು ಐದಾರು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕುಮಾರ್ ಅವರೀಗ ಮಂಗಳೂರಿನ ಕಂಕನಾಡಿಯಲ್ಲಿ ರಾಷ್ಟ್ರೀಕೃತ ಬ್ಯಾಕೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಇವರು ಕದ್ರಿ ದೇವರ ಭಕ್ತನಾಗಿದ್ದು, ಮಾಯಾರಿಗೆ ತಗುಲಿರುವ ಕ್ಯಾನ್ಸರ್ ವಾಸಿಗಾಗಿ ಒಂದು ವರ್ಷದ ಹಿಂದೆ ಶ್ರೀ ವೈದ್ಯನಾಥ ದೈವಸ್ಥಾನವೊಂದಕ್ಕೆ ಹೋಗಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರು.

ಕಳೆದ ವರ್ಷ ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನದ ವಾರ್ಷಿಕ ಬಂಡಿ ಜಾತ್ರೆ ನಡೆಯುವುದಕ್ಕಿಂತ ಎರಡು ತಿಂಗಳ ಮುಂಚೆ ಗುರುಪುರಕ್ಕೆ ಬಂದಿದ್ದ ಕುಮಾರ್ ಮತ್ತವರ ಕುಟುಂಬ, ಮಾಯಾರ ರೋಗ ಗುಣಮುಖವಾದಲ್ಲಿ ದೈವಕ್ಕೆ ಕಿರು ಸೇವೆ ನೀಡುತ್ತೇವೆ ಎಂದು ಪ್ರಾರ್ಥಿಸಿಕೊಂಡಿದ್ದರು.

ದೈವಸ್ಥಾನದ ವೈದ್ಯನಾಥ ಪಾತ್ರಿ ಕೌಡೂರು ಚಂದ್ರಹಾಸ ಪೂಜಾರಿಯವರಿಂದ ದೈವದ ಪ್ರಸಾದ ಸ್ವೀಕರಿಸಿದ್ದ ಕುಮಾರ್ ಕುಟುಂಬ ಕಳೆದ ವರ್ಷ ಫೆಬ್ರವರಿಯಲ್ಲಿ ಗುರುಪುರ ಬಂಡಿ ಜಾತ್ರೆಗೆ ಆಗಮಿಸಿದ್ದು, ಮಾಯಾರ ರಕ್ತರ ಕ್ಯಾನ್ಸರ್ ವಾಸಿಯಾಗುತ್ತಿದೆ ಎಂಬ ವಿಚಾರ ತಿಳಿಸಿದರು.

ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ಹೇಳಿಕೆಯಂತೆ ಮಾಯಾರ ಕ್ಯಾನ್ಸರ್ ವಾಸಿಯಾಗಿದೆ ಎನ್ನುವ ಕುಮಾರ್ ಹಾಗೂ ಅವರ ಕುಟುಂಬ ಅ. ೫ರಂದು ಗುರುಪುರಕ್ಕೆ ಮತ್ತೊಮ್ಮೆ ಆಗಮಿಸಿದ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆಯಲ್ಲಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕುಮಾರ್, ಅವರ ಪತ್ನಿ ಮೀರಾ ಹಾಗೂ ಮಾಯಾ ಮತ್ತು ಕುಟುಂಬದ ಇತರರಿಗೆ ಕೌಡೂರು ಚಂದ್ರಹಾಸ ಪೂಜಾರಿ ಪ್ರಸಾದ ನೀಡಿ, ಗೌರವಿಸಿದರು. ಈ ಸಂದರ್ಭದಲ್ಲಿ ದೈವದ ಪರಿಚಾರಕರು, ಭಕ್ತರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *