ಜ.8: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಮರಳು ನೀತಿಯನ್ನು ವಿರೋಧಿಸಿ ಲಾರಿ ಮಾಲೀಕರು ರಾಜ್ಯದಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಿಂದ ಮರಳು ಕೊರತೆ ಉಂಟಾಗಿದ್ದು, ಮನೆ ಹಾಗೂ ಇತರ ಕಟ್ಟಡ ನಿರ್ಮಾಣ ಕಾಮಗಾರಿ ಕ್ಷೇತ್ರ ತತ್ತರಿಸಿದೆ.
ಮರಳಿನ ಬೆಲೆ ಗಗನಮುಖಿಯಾಗಿದೆ. ಈ ನಡುವೆ ಮರಳಿನ ಕೊರತೆ ಉಂಟಾಗಿದ್ದು. ಕಟ್ಟಡ ಕಾಮಗಾರಿಗಳು ಕ್ರಮೇಣ ಸ್ಥಗಿತಗೊಳ್ಳುತ್ತಿವೆ. ಕೂಲಿಯನ್ನೇ ನಂಬಿಕೊಂಡಿದ್ದ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ರಾಜ್ಯದಲ್ಲಿ ಮರಳು ಸಾಗಣೆ ಮಾಡುವ ಲಾರಿಗಳು 30,000 ಇವೆ. ರಾಜ್ಯಕ್ಕೆ ಪ್ರತಿದಿನ 15,000 ಲೋಡ್ ಹಾಗೂ ನಗರಕ್ಕೆ 3,000 ಲೋಡ್ ಮರಳು ಬೇಕಿದೆ. ಮುಷ್ಕರದ ಕಾರಣದಿಂದ ಮರಳು ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ.
ಈ ಹಿಂದೆ ಒಂದು ಲೋಡ್ ಮರಳು (ಆರು ಚಕ್ರದ ವಾಹನ) ಬೆಲೆ ರೂ 24,000 ಇತ್ತು. ಇದೀಗ ಅದರ ಬೆಲೆ ರೂ 70,000ಕ್ಕೆ ಏರಿದೆ. 10 ಚಕ್ರದ ವಾಹನದ ಮರಳು ಲೋಡ್ ಬೆಲೆ ರೂ 1,00,000 ಗಡಿ ದಾಟಿದೆ. ಒಂದು ಟ್ರಾಕ್ಟರ್ ಮರಳಿನ ಬೆಲೆ ರೂ 5,000-6,000 ಇತ್ತು. ಇದೀಗ ಅದರ ಬೆಲೆ ರೂ 14,000ಕ್ಕೆ ಜಿಗಿದಿದೆ. ಸದ್ಯ ಗಣಿಗಾರಿಕೆ ಪ್ರದೇಶಗಳಿಂದ ಮರಳು ಸಾಗಣೆ ಆಗುತ್ತಿಲ್ಲ. ಮುಷ್ಕರದ ನಡುವೆಯೂ ಕಾಳಸಂತೆಯಲ್ಲಿ ಮರಳು ಮಾರಾಟ ಜೋರಾಗಿ ನಡೆಯುತ್ತಿದೆ. ಪ್ರತಿಭಟನೆಯನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ಲಾರಿ ಮಾಲೀಕರು ಫಿಲ್ಟರ್ ಮರಳನ್ನು ಅವ್ಯಾಹತವಾಗಿ ಸಾಗಣೆ ಮಾಡಿ, ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
‘ನೂತನ ಮರಳು ನೀತಿ ಅವೈಜ್ಞಾನಿಕವಾಗಿದೆ. ಮುಷ್ಕರದಿಂದ ಮರಳು ಸಾಗಣೆ ಲಾರಿ ಮಾಲೀಕರು ಪ್ರತಿದಿನ ರೂ2 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ದಿನಕ್ಕೆ ರೂ4 ಕೋಟಿ ನಷ್ಟ ಅನುಭವಿಸುತ್ತಿದೆ. ಮುಷ್ಕರ ಆರಂಭಿಸುವ ಮೊದಲೇ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಸಕಾರಾತ್ಮಕ ಬಂದಿಲ್ಲ’ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಣುಗಪ್ಪ ದೂರಿದರು.
