ಕೈಕಂಬ : ಸುಮಾರು ಒಂದೂವರೆ ತಿಂಗಳ ಹಿಂದೆ(ಜುಲೈ 5) ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‍ನಲ್ಲಿ ಸಂಭವಿಸಿದ ಗುಡ್ಡ ಕುಸಿತ ಹಾಗೂ ಇಬ್ಬರ ಭೂಸಮಾಧಿ ದುರ್ಘಟನೆ ಬಳಿಕ ಮನೆ ಖಾಲಿ ಮಾಡಿರುವ ಸಂತ್ರಸ್ತರಿಗೆ ಈವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಭೀಕರ ದುರ್ಘಟನೆಯು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗೊಂದಲದ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು, ಸಂತ್ರಸ್ತರು ಕಂಗಾಲಾಗಿದ್ದಾರೆ.gur-aug-23-gudda kusitha-1

gur-aug-23-uday bhat-1

ಅಧಿಕೃತ ಸಮೀಕ್ಷೆಯೊಂದರ ಪ್ರಕಾರ ಮಠದಗುಡ್ಡೆ ಸರ್ವೇ ನಂಬ್ರ 133ರ ಸೈಟಿನಲ್ಲಿ ಒಟ್ಟು 126 ವಾಸ್ತವ್ಯದ ಮನೆಗಳಿದ್ದು, ನೂರಾರು ಮಂದಿ ಅರ್ಹ ಮತದಾರರಿದ್ದಾರೆ. ಇವರು ಹಿಂದಿನ ಹಲವು ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಅಥವಾ ಈ ವರ್ಷದ ಜನವರಿ-ಫೆಬ್ರವರಿಯಲ್ಲಿ 74 ಅರ್ಹ ಕುಟುಂಬಗಳಿಗೆ ಸಿಗಬೇಕಿದ್ದ ಹಕ್ಕುಪತ್ರ(94ಸಿಸಿ ಅರ್ಜಿ) ನೀಡಿಕೆ ಪ್ರಕ್ರಿಯೆ ಕೊರೊನಾ ಲಾಕ್‍ಡೌನ್‍ನಿಂದ ಮುಂದೂಡಲ್ಪಟ್ಟಿದೆ ಮತ್ತು ಇದುವರೆಗೆ ಅರ್ಹರಿಗೆ ಹಕ್ಕುಪತ್ರ ಲಭಿಸಿಲ್ಲ. ಕೆಲವು ಸಮಯದ ಹಿಂದೆಯೇ ತಹಶೀಲ್ದಾರ್, ಸಂಬಂಧಿತ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕ ಡಾ. ಭರತ್ ಶೆಟ್ಟಿ ಈ ವಿಷಯ ದೃಢಪಡಿಸಿದ್ದರು.

ಗುಡ್ಡ ಕುಸಿತದ ಬಳಿಕ ಸ್ಥಳಾಂತರಗೊಂಡಿರುವ ಕುಟುಂಬಗಳಿಗೆ ಉಳಿದುಕೊಳ್ಳಲು ಬಾಡಿಗೆ ಮನೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕುಟುಂಬವೊಂದಕ್ಕೆ ತಿಂಗಳಿಗೆ ತಲಾ 2,500 ರೂ ಬಾಡಿಗೆ ಲಭಿಸಲಿದೆ ಎಂಬ ಹೇಳಿಕೆಗಳು ಪದೇಪದೇ ಕೇಳಿ ಬರುತ್ತಿದೆ. ಆದರೆ ಈವರೆಗೆ ಬಾಡಿಗೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ ಎನ್ನುವ ಸಂತ್ರಸ್ತರು, ಬಾಡಿಗೆ ಮನೆ ಮಾಲಕರ ಕಿರಿಕಿರಿ ಹೇಳತೀರದು ಎಂದಿದ್ದಾರೆ. ಬೊಂಡಂತಿಲದಲ್ಲಿ ಅಥವಾ ಗುರುಪುರ ಗ್ರಾಪಂ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಜಾಗ ಗುರುತಿಸುವ ಕೆಲಸ ಈವರೆಗೂ ನಡೆದಿಲ್ಲ ! ಇವೆಲ್ಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ.

ಎನ್‍ಐಟಿಕೆ ಸರ್ವೇ

ಮಠದಗುಡ್ಡೆಯಲ್ಲಿ 200ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಗುಡ್ಡದಲ್ಲಿರುವ ಎಲ್ಲ ಮನೆ ಖಾಲಿ ಮಾಡುವಂತೆ ಎನ್‍ಐಟಿಕೆ ಅಧ್ಯಯನ ತಂಡದ ವರದಿಯಂತೆ ಸೂಚಿಸಲಾಗಿದೆ ಎಂದು ತಾಪಂ ಸಭೆಯಲ್ಲಿ ತಹಶೀಲ್ದಾರ್ ಗುರುಪ್ರಸಾದ್ ಹೇಳಿಕೆ ನೀಡಿದ್ದರು.

ಆದರೆ ಗುಡ್ಡದ ಧಾರಣಾ ಸಾಮಥ್ರ್ಯ ಅಧ್ಯಯನಕ್ಕಾಗಿ ಎನ್‍ಐಟಿಕೆ ತಜ್ಞರ ತಂಡ ಗುರುಪುರ ಬಂದೇ ಇಲ್ಲ ಎಂದು ಸಂತ್ರಸ್ತರು ಮತ್ತು ಗುರುಪುರ ಗ್ರಾಪಂ ಆಡಳಿತ ಹೇಳಿಕೆ ನೀಡಿದ್ದು, ಈ ಬಗ್ಗೆ ತಹಿಶೀಲ್ದಾರರಲ್ಲಿ ಪ್ರಶ್ನಿಸಿದಾಗ, “ಅಧ್ಯಯನ ತಂಡ ಸ್ಥಳಕ್ಕೆ ಬಂದಿಲ್ಲ. ಕೊಡಗಿನಲ್ಲಿ ನಡೆದಿರುವ ಗುಡ್ಡ-ಭೂಕುಸಿತ ಅಧ್ಯಯನ ಆಧಾರಿಸಿ ಹಾಗೂ ಗುರುಪುರದಲ್ಲಿ ಪದೇಪದೇ ಗುಡ್ಡ ಕುಸಿತ ನಡೆಯುವ ಹಿನ್ನೆಲೆಯಲ್ಲಿ ಎನ್‍ಐಟಿಕೆ ಅಧ್ಯಯನ ತಂಡ ಕಚೇರಿಯಲ್ಲಿದ್ದುಕೊಂಡೇ ಭೌಗೋಳಿಕ ಸ್ಥಿತಿಯನ್ನಾಧರಿಸಿ ಕಂಪ್ಯೂಟರೀಕೃತ ವರದಿ ನೀಡಿದೆ. ಆದರೆ ಈ ವರದಿ ಬಗ್ಗೆ ಸಂತ್ರಸ್ತರಿಗೆ ವಿಶ್ವಾಸವಿಲ್ಲ. ತಂಡವು ನಿರ್ದಿಷ್ಟ ಸ್ಥಳಕ್ಕೆ ಬಂದು ಅಧ್ಯಯನ ನಡೆಸಿ, ಸಂತ್ರಸ್ತರ ಮುಂದೆ ಈ ವಿಷಯ ಬಹಿರಂಗಪಡಿಸಬೇಕಾಗುತ್ತದೆ. ಈ ಬಗ್ಗೆ ಎನ್‍ಐಟಿಕೆಯೊಂದಿಗೆ ಮಾತುಕತೆ ನಡೆಸಿದ್ದೇವೆ” ಎಂದು ತಹಶೀಲ್ದಾರ್ ಮಾಧ್ಯಮ ಪ್ರತಿನಿಧಿಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಈ ಗುಡ್ಡದಲ್ಲಿ 200 ಮನೆಗಳು ಎಲ್ಲಿಂದ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಲು ತಹಶೀಲ್ದಾರ್ ನಿರಾಕರಿಸಿದ್ದಾರೆ.

ಶಾಸಕರ ಭರವಸೆ ಏನಾಯಿತು ?

2019 ಡಿಸೆಂಬರಿನಲ್ಲಿ ಗುರುಪುರದಲ್ಲಿ ನಡೆದಿದ್ದ ರಸ್ತೆ ಗುದ್ದಲಿ ಪೂಜೆಯೊಂದರ ಸಂದರ್ಭದಲ್ಲಿ ಮಠದಗುಡ್ಡೆ ಮೂಳೂರು ಸೈಟ್‍ನಲ್ಲಿ(133) ಪ್ರಸಕ್ತ ವಾಸ್ತವ್ಯದಲ್ಲಿದ್ದು, ಇನ್ನೂ ಹಕ್ಕುಪತ್ರ ಲಭಿಸಿದ ಕುಟುಂಬಗಳಿಗೆ 2020ರ ಜನವರಿಯಿಂದ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಕ್ಕುಪತ್ರ ಇದ್ದವರಿಗೆ ಮಾತ್ರ ಸರ್ಕಾರದಿಂದ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದಿದ್ದಾರೆ ಎನ್ನಲಾಗಿದ್ದು, ಇದರಿಂದ ಸಂತ್ರಸ್ತ ಕುಟುಂಬಗಳ ಸಂಕಷ್ಟಕ್ಕೆ ಬರೆ ಎಳೆದಂತಾಗಿದೆ.

ಪ್ರತಿಭಟನೆ ಎಚ್ಚರಿಕೆ :

“ಕೊರೊನಾ ಲಾಕ್‍ಡೌನ್‍ನಿಂದ 74 ಕುಟುಂಬಗಳಿಗೆ ನಿಕಟಭವಿಷ್ಯದಲ್ಲಿ ಲಭಿಸಬೇಕಿದ್ದ ಹಕ್ಕುಪತ್ರ ವಿಳಂಬವಾಗಿದೆ. ಆದ್ದರಿಂದ 94ಸಿಸಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಂಡ ಎಲ್ಲ ಕುಟಂಬಿಕರಿಗೆ ಪುನರ್ವಸತಿ ಕಲ್ಪಿಸಬೇಕು. ಇಲ್ಲಿ ವಾಸ್ತವ್ಯ ಹೊಂದಿದ್ದ ಎಲ್ಲ 126 ಕುಟುಂಬಗಳ ಅರ್ಹ ಮತದಾರರು ಹಲವು ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಹೀಗೆ ಇವರಿಂದ ಮತ ಪಡೆದುಕೊಂಡಿರುವ ಜನಪ್ರತಿನಿಧಿಗಳು, ನಿಯಮಾನುಸಾರಿ ಹಕ್ಕುಪತ್ರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರು ಅಥವಾ ಮತದಾರರನ್ನು ಸತಾಯಿಸುವುದು ತಪ್ಪು. ಒಂದೊಮ್ಮೆ 74 ಮಂದಿಯ ಹಕ್ಕುಪತ್ರ ವಿಲೇ ಮಾಡದೆ, ಕಡೆಗಣಿಸಿದರೆ ಜಿಪಂ, ತಾಪಂ ಸದಸ್ಯರು ಹಾಗೂ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಸಂತ್ರಸ್ತರ ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಹಿಂದೇಟು ಹಾಕೆವು” ಎಂದು ಗುರುಪುರ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಎಚ್ಚರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *