ಬಂಟ್ವಾಳ: ಮೆಸ್ಕಾಂ ಮೀಟರ್ ರೀಡರ್ಗಳ ಕೆಲಸದ ವಿಚಾರ ಹಾಗೂ ವೇತನ ಕಡಿತದ ಕುರಿತು ಜಿಲ್ಲೆಯ ಶಾಸಕರು, ಸಚಿವರು, ಸಂಸದರ ಗಮನಕ್ಕೆ ತಂದರೂ, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜತೆಗೆ 2 ತಿಂಗಳ ವೇತನ ನೀಡದೆ ಮೆಸ್ಕಾಂ ಅಧಿಕಾರಿಗಳು ಸತಾಯಿಸುತ್ತಿದ್ದು, ರೀಡರ್ಗಳಿಂದ ಮೆಷಿನ್ ನೀಡುವಂತೆ ಒತ್ತಡ ಹಾಕುತ್ತಿದೆ ಎಂದು ದಲಿತ್ ಸೇವಾ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಆರೋಪಿಸಿದ್ದಾರೆ.
ಅವರು ಬಿ.ಸಿ.ರೋಡಿನಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರರ ಹೆಸರಿನಲ್ಲಿ ಸರಕಾರ ಹಾಗೂ ಮೆಸ್ಕಾಂ ಇಲಾಖೆ ಪಿತೂರಿ ನಡೆಸಿ ರೀಡರ್ಗಳಿಗೆ ಅನ್ಯಾಯ ಮಾಡುತ್ತಿದೆ. ಹಿಂದಿನ ಗುರಿಯನ್ನು ಗ್ರಾಮೀಣ ಭಾಗದಲ್ಲಿ 2500, ನಗರದಲ್ಲಿ 3500ಕ್ಕೆ ವಿಸ್ತರಿಸಿ ,ಹೆಚ್ಚುವರಿ ರೀಡರ್ಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಎಲ್ಲರಿಗೂ ಕೆಲಸ ಬೇಕಾದರೆ ವೇತನದಲ್ಲಿ ಅರ್ಧ ಬೇರೆಯವರಿಗೆ ನೀಡುವಂತೆ ಗುತ್ತಿಗೆದಾರ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದರು.ಈಗಾಗಲೇ ಮೆಷಿನ್ ನೀಡದೇ ಇರುವ ಕುರಿತು ರೀಡರ್ಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕನಿಷ್ಟ ವೇತನ ನೀಡದೇ ಇರುವ ಕುರಿತು ನಾವು ಕೂಡ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದು, ಜತೆಗೆ ಕಾನೂನು ಹೋರಾಟ ನಡೆಸಲಿದ್ದೇವೆ ಎಂದರು.ಪ್ರತಿವರ್ಷ ಮೆಸ್ಕಾಂ ವಿದ್ಯುತ್ ದರ ಏರಿಕೆ ಮಾಡುತ್ತದೆ,ಅಧಿಕಾರಿಗಳು ಐದಂಕೆಯ ವೇತನ ಸಹಿತ ಸವಲತ್ತು ಪಡೆಯುತ್ತಾರೆ.ಆದರೆ ಇಲಾಖೆಯ ಬೆನ್ನೆಲುಬಾಗಿದ್ದು,ಆದಾಯ ತರುವಂತ ಕೆಲಸ ನಿರ್ವಹಿಸುವ ಗುತ್ತಿಗೆ ಮಾಪಕ ಓದುಗರಿಗೆ ವರ್ಷ ಹೋದಂತೆ ವೇತನ ಕಡಿಮೆಯಾಗುತ್ತಿದೆ ಎಂದ ಅವರು ಈ ಎಲ್ಲಾ ಸಮಸ್ಯೆಯಮ್ನು ಮುಂದಿಟ್ಟುಕೊಂಡು ಆ.25 ರಿಂದ ಬಂಟ್ವಾಳ ಮೆಸ್ಕಾಂ ವಿಭಾಗೀಯ ಕಚೇರಿಯ ಎದುರು ಅನಿರ್ಧಿಷ್ಠಾವಧಿ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮೀಟರ್ ರೀಡರ್ ಆಗಿ ಕಾರ್ಯ ನಿರ್ವಹಿಸುವ ಚಂದ್ರಶೇಖರ್ ವಿಟ್ಲ, ಜಯರಾಮ, ಗೋಪಾಲ ನೇರಳಕಟ್ಟೆ, ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.
