ಮಂಗಳೂರು:ಮುದ್ದು ಮುದ್ದಾಗಿ ಬಾಲ್ಯ ಸಹಜ ತುಂಟತನದಿಂದ ಜೀವನೋತ್ಸಾಹದ ಚಿಲುಮೆಯಂತಿದ್ದ ಹತ್ತರ ಹರೆಯದ ಬಾಲಕ ಭವಿತ್ ಶೆಟ್ಟಿ ವಿಚಿತ್ರ ಕಾಯಿಲೆಗೆ ತುತ್ತಾಗಿ ನಿಸ್ತೇಜನಾಗಿ ಹಾಸಿಗೆ ಹಿಡಿದಂತಾಗಿದ್ದು, ಸತತ ಖರ್ಚು ವೆಚ್ಚಗಳ ಬಳಿಕ ಗೋಚರಿಸಲ್ಪಟ್ಟ ಹೊಸ ಚಿಕಿತ್ಸೆಗೆ ದೇಹ ಸ್ಪಂದಿಸಲಾರಂಭಿಸಿದೆಯಾದರೂ ಕೈಯಲ್ಲಿ ಹಣವಿಲ್ಲದೆ ಕಂಗೆಟ್ಟ ಹೆತ್ತವರಿಗೆ ತನ್ನ ವಂಶದ ಕುಡಿಯನ್ನು ಉಳಿಸಿಕೊಳ್ಳಲು ಸಮಾಜದ ಬಂಧುಗಳಲ್ಲಿ ನೆರವಿಗೆ ಅಂಗಾಲಾಚುತ್ತಿದ್ದಾರೆ. ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ಹೂವಿನ ವ್ಯಾಪಾರಿಯಾಗಿದ್ದ ಹರೀಶ್ ಶೆಟ್ಟಿರವರ ಮೊಮ್ಮಗ ಪ್ರಸಕ್ತ ಉಪ್ಪಿನಂಗಡಿಯಲ್ಲಿಯೇ ಚಿಕಿತ್ಸೆ ಸಂಬಂಧಿಸಿ ವಾಸ್ತವ್ಯವನ್ನು ಹೊಂದಿರುವ ಸೌಮ್ಯ ಶೆಟ್ಟಿ -ಗಿರೀಶ್ ಶೆಟ್ಟಿ ದಂಪತಿಗಳ ಏಕೈಕ ಪುತ್ರ ಭವಿತ್ (10) ಎಂಬಾತನೇ ವಿಸ್ಮಯಕಾರಿ ಕಾಯಿಲೆಗೆ ತುತ್ತಾಗಿ ನರಳುತ್ತಿರುವ ಬಾಲಕ.
ತನ್ನ ಹೆತ್ತವರೊಂದಿಗೆ ನಾಸಿಕ್ ನಲ್ಲಿ ಇದ್ದಾಗ ಶಾಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಈತ ತನ್ನ ನಾಲ್ಕನೇ ತರಗತಿಯ ವರೆಗೆ ಕಲಿಕೆ, ಕರಾಟೆ , ಕ್ರೀಡೆಗಳಲ್ಲಿ ಸದಾ ಮುಂದಿದ್ದ. ಮುದ್ದಿನ ಅಮ್ಮ ಅಪ್ಪನನ್ನು ತುಂಟಾಟದಿಂದ ಕಾಡುತ್ತಾ , ಮನೆಗೆ ಅತಿಥಿಗಳನ್ನು ಕರೆಯಿಸಿ, ಅವರೊಡನೆ ಮಾತುಕತೆಯನ್ನಾಡುತ್ತಾ ಅವರನ್ನು ಸತ್ಕರಿಸುವುದರಲ್ಲಿ ಸದಾ ಸಂತಸಗೊಳ್ಳುತ್ತಿದ್ದ.
ಇಂತಹ ಕ್ರಿಯಾಶೀಲ ಬಾಲಕ ಕಳೆದ ಹದಿನೈದು ತಿಂಗಳ ಹಿಂದೆ ಮಂಕಾಗುತ್ತಾ ಬಂದಾಗ ಪರೀಕ್ಷಿಸಿದ ವೈದ್ಯರು ಅಡ್ರಿನೋಮಿಲೋನ್ಯೂರೋಪತಿ ಎಂಬ ಬಲು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆಂದು ತಿಳಿಸಿದರು. ಮಾತ್ರವಲ್ಲದೆ ಜೀವಿತಾವಧಿಯು ಕೇವಲ 6 ತಿಂಗಳೆಂದು ತಿಳಿಸಿದರು.ತಮ್ಮ ಏಕೈಕ ಕರುಳ ಕುಡಿಯನ್ನು ಉಳಿಸುವ ಸಲುವಾಗಿ ಕಂಡ ಕಂಡ ಆಸ್ಪತ್ರೆಯ ಕದ ತಟ್ಟಿದರು. ಅಲ್ಲಿನ ವ್ಯೆದ್ಯರು ತಿಳಿಸಿದ ಚಿಕಿತ್ಸೆಯನ್ನೆಲ್ಲಾ ತನ್ನ ಮಗನಿಗೆ ಕೊಡಿಸಿದರು. ಈ ವೇಳೆಗೆ ತಮ್ಮ ಸಂಪಾದನೆ ಕರಗಿ ಸಾಲ ಬೆಟ್ಟದಷ್ಟು ಬೆಳೆಯಿತ್ತಾದರೂ ಬಾಲಕ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಾ ಬಂದು ವಾಕ್ ,ಶ್ರವಣ, ದೃಷ್ಠಿಗಳನ್ನು ಕಳಕೊಂಡು ನಿಸ್ತೇಜನಾಗಿ ಹಾಸಿಗೆ ಹಿಡಿದ .
ಎಲ್ಲಾ ಚಿಕಿತ್ಸೆಗಳು ನಿರುಪಯುಕ್ತಗೊಂಡು ಬಾಳು ಕಗ್ಗತ್ತಲಲ್ಲಿ ಮುಳುಗಿದಂತಾದಾಗ ಬೆಂಗಳೂರಿನ ಡಾ ಶ್ರೀನಿವಾಸ್ ಶೆಣೈ ರವರು ಬಾಲಕ ಮತ್ತೆ ಮೊದಲಿನಂತಾಗಬಲ್ಲ. ಆದರೆ ಕನಿಷ್ಠ 13 ಲಕ್ಷದಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಪೂರಕವೆಂಬಂತೆ ಚಿಕಿತ್ಸೆಯನ್ನು ಪ್ರಾರಂಭಿಸಿದ್ದು, ಸಂಪೂರ್ಣ ಕಪ್ಪು ವರ್ಣಕ್ಕೆ ತಿರುಗಿದ್ದ ಬಾಲಕನ ಮೈಬಣ್ಣ ನಿಧಾನಗತಿಯಲ್ಲಿ ಮೊದಲಿನಂತಾಗತೊಡಗಿದೆ. ಚಿಕಿತ್ಸೆ ಮಗುವಿನ ಆರೋಗ್ಯದಲ್ಲಿ ಸುಧಾರಣೆಯನ್ನು ತರಬಲ್ಲದು ಎಂಬ ವಿಶ್ವಾಸ ಹೆತ್ತವರಿಗೆ ಮೂಡಿದೆಯಾದರೂ ,ಚಿಕಿತ್ಸೆಗೆ ಅಗತ್ಯವಿರುವ ಲಕ್ಷಾಂತರ ರೂಪಾಯಿ ಹಣ ಹೊಂದಿಸಲಾಗದೆ ಕಂಗೆಟ್ಟಿದ್ದಾರೆ. ತಮ್ಮ ಕರುಳಕುಡಿಯ ಉಳಿಸುವಿಕೆಗಾಗಿ ಸಮಾಜದ ಮುಂದೆ ಸಹಾಯ ಹಸ್ತ ಚಾಚಿದ್ದಾರೆ. ಸಹೃದಯೀ ಬಂಧುಗಳು ಬಾಲಕನ ತಾಯಿಯ ಬ್ಯಾಂಕ್ ಖಾತೆಗೆ ಹಣವನ್ನು ನೀಡಿ ಸಹಕರಿಸಬಹುದು. ಖಾತೆದಾರರ ಹೆಸರು : ಸೌಮ್ಯ ಗಿರೀಶ್ ಶೆಟ್ಟಿ,
ಬ್ಯಾಂಕ್ ಹೆಸರು /ಶಾಖೆ :ಸಿಂಡಿಕೇಟ್ ಬ್ಯಾಂಕ್ , ಉಪ್ಪಿನಂಗಡಿ ಶಾಖೆ
ಉಳಿತಾಯ ಖಾತೆ ಸಂಖ್ಯೆ : 01402610013430
ಐ ಎಫ್ ಎಸ್ ಸಿ ನಂಬ್ರ : ಎಸ್‍ವೈಎನ್‍ಬಿ0000140
ಎಂ ಐ ಸಿ ಆರ್ ಕೋಡ್ : 575025050
ಸಂಪರ್ಕ ಸಂಖ್ಯೆ : 7350819227

