ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾದ ನೂತನ ವಸತಿ ನಿಲಯ ಪದ್ಮಾವತಿಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭವಿಷ್ಯವನ್ನು ಕಟ್ಟುವ ವಿದ್ಯಾರ್ಥಿಗಳಲ್ಲಿ ಛಲ, ಶಿಸ್ತು, ಶ್ರದ್ಧೆಯನ್ನು ಹೊಂದಿದ್ದರೆ ಜೀವನದಲ್ಲಿ ಅವರು ಮಹತ್ತರವಾದ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳಾಗಿದ್ದಾಗಲೇ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಿಂಹನಗದ್ದೆ ಸರಸಿಂಹರಾಜಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಾತನಾಡಿ, ವಿದ್ಯಾರ್ಥಿಯಾದವನು ವಿದ್ಯೆಯನ್ನು ಕಠಿನ ವೃತದಂತೆ ಅಧ್ಯಯನ ಮಾಡಬೇಕು ಬೆನ್ನಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ಅಳದಂಗಡಿಯ ಅರಸರ್ರದ ಪದ್ಮಪ್ರಸಾದ ಅಜಿಲ, ಮಾಜಿ ಸಚಿವ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
