ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬೇರೆ ಕಡೆಗಳಲ್ಲಿ ಮತದಾನಕ್ಕೆ ಹೋಗಬೇಕಾದ ಮತದಾರರು ಸಕಾಲಕ್ಕೆ ಬಸ್ ಸೌಲಭ್ಯ ದೊರೆಯದೆ ಪರದಾಡಿದರು.
ಅದರಲ್ಲೂ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳಲು ಬೆಳಗ್ಗೆ ಮಂಗಳೂರಿನ ಬಿಜೈನಲ್ಲಿ ರುವ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ ಮಂದಿ ಅಲ್ಲಿಂದ ಮತಗಟ್ಟೆಗಳಿಗೆ ತೆರಳುವುದಕ್ಕೆ ನೇರ ಬಸ್ ಸೇವೆ ಸಿಗದೆ ತಾಸುಗಟ್ಟಲೆ ಕಾದು ನಿಂತು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಾಣಿಸಿತು.
ಬಿ.ಸಿ. ರೋಡು, ಧರ್ಮಸ್ಥಳ, ಉಪ್ಪಿನಂಗಡಿ, ಚಿಕ್ಕಮಗ ಳೂರು, ಪುತ್ತೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ಬಸ್ ಸಂಖ್ಯೆ ವಿರಳವಿತ್ತು. ಮಂಗಳೂರಿನಿಂದ ಪುತ್ತೂರಿಗೆ ಕೂಡ ಕೆಲವೇ ಬಸ್‌ಗಳು ಇದ್ದುದರಿಂದ ಹೆಚ್ಚಿನ ಮಂದಿ ಬೆಂಗಳೂರಿಗೆ ತೆರಳುವ ಐರಾವತ, ರಾಜಹಂಸ ಬಸ್‌ಗಳನ್ನೇರಿದ್ದು, ದುಪ್ಪಟ್ಟು ಹಣ ನೀಡಿ ಪ್ರಯಾಣಿಸಿದರು.
ಧರ್ಮಸ್ಥಳ, ಬೆಳ್ತಂಗಡಿ, ಚಿಕ್ಕಮಗಳೂರು, ಮೂಡಿಗೆರೆ ಸೇರಿದಂತೆ ವಿವಿಧ ಪ್ರದೇಶದ ಮಂದಿ ಮತದಾನ ಮಾಡಲು ತಮ್ಮ ಊರುಗಳಿಗೆ ತೆರಳಲು ಪರದಾಡಿದರು. ನಗರದ ಖಾಸಗಿ ಸಿಟಿ ಬಸ್ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು.
ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹೊರಟ ಖಾಸಗಿ, ಸರಕಾರಿ ಬಸ್‌ಗಳು ಬೆಳಗ್ಗೆ ಸುಮಾರು 6.30ಗೆ ಮಂಗಳೂರು ತಲುಪುತ್ತವೆ. ಆದರೆ ಶುಕ್ರವಾರ ರಾತ್ರಿ ಪ್ರಯಾಣಿಕರು ಹೆಚ್ಚಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿಯಿಂದ ತೆರಳುವಾಗಲೇ ರಾತ್ರಿ 12 ಗಂಟೆ ಕಳೆದಿತ್ತು, ಈ ಕಾರಣದಿಂದ ಅನೇಕ ಬಸ್‌ಗಳು ಬೆಳಗ್ಗೆ ಸುಮಾರು 9 ಗಂಟೆಯ ಬಳಿಕ ಮಂಗಳೂರಿಗೆ ತಲುಪಿದವು.
ರವಿವಾರದ ಮುಂಗಡ ಬುಕ್ಕಿಂಗ್ ಫುಲ್
ಚುನಾವಣೆ ಶನಿವಾರ ಬಂದ ಕಾರಣ ದೂರದ ಊರುಗಳಿಂದ ಕರಾವಳಿ ಪ್ರದೇಶಕ್ಕೆ ಬಂದ ಹೆಚ್ಚಿನ ಮಂದಿ ರವಿವಾರ ಪುನಃ ತೆರಳುತ್ತಿದ್ದಾರೆ. ಬಸ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಬಹುತೇಕ ಫುಲ್ ಆಗಿದೆ. ಖಾಸಗಿ ಬಸ್ ಮಾಲಕರು ಮಂಗಳೂರಿನಿಂದ ಬೆಂಗಳೂರಿಗೆ 2000 ರೂ. ನಿಗದಿ ಮಾಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

