ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ದಿನಗಳ ಹಿಂದಿನಿಂದಲೇ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿತ್ತು. ಅಷ್ಟೇ ಏಕೆ? ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಧಿಕೃತವಾಗಿ ಹೆಸರು ಪ್ರಕಟವಾಗದಿದ್ದರೂ, ಬಿ.ವೈ. ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಇಂದು ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ವರುಣಾ ಕ್ಷೇತ್ರದ ಅಭ್ಯರ್ಥಿ ಪ್ರಕಟವಾಗಲಿಲ್ಲ. ಇದರ ಬೆನ್ನಲೇ ನಂಜನಗೂಡಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ‘ನನ್ನ ಮಗ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ’ ಎಂದು ಹೇಳಿದ್ದೇ ತಡ, ಮೈಸೂರು ನಗರಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.
ಅನಂತ್ ಕುಮಾರ್, ಅಮಿತ್ ಷಾ ಪ್ರತಿಕೃತಿ ದಹನ; ಲಾಠಿ ಚಾರ್ಜ್
ವರುಣಾ ಕ್ಷೇತ್ರದಿಂದ ಕಡೆ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಲು ಕೇಂದ್ರ ಸಚಿವ ಅನಂತ ಕುಮಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೇ ಕಾರಣ ಎಂದು ಆರೋಪಿಸಿ ವಿಜಯೇಂದ್ರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರೊಚ್ಚಿಗೆದ್ದು ಮೂವರೂ ನಾಯಕರ ಪ್ರತಿಕೃತಿ ದಹನ ಮಾಡಿದರು. ಅಲ್ಲದೆ, ಯಡಿಯೂರಪ್ಪ ಅವರು ತಂಗಿದ್ದ ಖಾಸಗಿ ಹೋಟೆಲ್’ನ ಕಿಟಕಿ ಗಾಜುಗಳಿಗೆ ಹಾನಿಗೊಳಿಸಿದರು. ಪರಿಸ್ಥಿತಿ ಕೈಮೀರಿದ್ದರ ಹಿನ್ನೆಲೆಯಲ್ಲಿ ಘರ್ಷಣೆಯನ್ನು ನಿಯಂತ್ರಣಕ್ಕೆ ತರಲು ಪೋಲಿಸ್ ಲಾಠಿ ಚಾರ್ಜ್ ನಡೆಸಬೇಕಾಯಿತು.

