ಹಲಗೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರ ಬೆಂಗಾವಲಿನ ಕಾರು ಅಪಘಾತಕ್ಕೆ ತುತ್ತಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಮಂಗಳವಾರ ತಡ ರಾತ್ರಿ ನಡೆದಿದೆ.
ಹೆಗಡೆ ಕಾರಿನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ, ಟ್ರಕ್ ವೊಂದು ಬಂದು ಅವರ ಕಾರನ್ನು ಗುದ್ದಲು ಪ್ರಯತ್ನಿಸಿತ್ತು. ಆದರೆ ಅವರು ವೇಗವಾಗಿ ಚಲಿಸುತ್ತಿದ್ದರಿಂದ ಅವರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಅವರ ಹಿಂದೆ ಚಲಿಸುತ್ತಿದ್ದ ಬೆಂಗಾವಲಿನ ಕಾರಿಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಹಾಯಕ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಹೆಗಡೆ, ‘ಇದು ನನ್ನನ್ನು ಕೊಲೆ ಮಾಡಲು ಬೇಕೆಂದೇ ಮಾಡಿದ ಪಿತೂರಿ. ನಮ್ಮ ಸಹಾಯಕ ಸಿಬ್ಬಂದಿಯೊಬ್ಬರು ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಗಂಭೀರ ತನಿಖೆ ಆಗಬೇಕು’ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಘಟನೆಗು ಮುನ್ನ ಆತ ಯಾವುದೇ ರೀತಿಯ ಮದ್ಯಸೇವನೆ ಮಾಡಿರಲಿಲ್ಲ ಎಂಬುದು ದೃಢವಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

