MBL-27-11-697x376

ಮುದ್ದೇಬಿಹಾಳ: ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನಿವಾಸದ ಮೇಲೆ ಮಂಗಳವಾರ ಸಂಜೆ ತಹಶೀಲ್ದಾರ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮಂಗಳವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು,  ಶಾಸಕ ಎ.ಎಸ್.ಪಾಟೀಲ ನಡಹಳ್ಳಿ  ನಡೆಸುತ್ತಿರುವ ಧಾರ್ಮಿಕ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು ಶಾಸಕರ ಮನೆ ತಪಾಸಣೆ ನಡೆಸಿದರು.

ಈ ವೇಳೆ ಶಾಸಕ ನಡಹಳ್ಳಿ ಮಾತನಾಡಿ, ಕಳೆದ ಮೂರು ದಿನದಿಂದ ನಮ್ಮ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಸಂಸ್ಕೃತಿಯ ಪ್ರಕಾರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಹಿಳೆಯರಿಗೆ ಉಡುಗೊರೆ ನೀಡುವುದು ವಾಡಿಕೆ. ಇದನ್ನು ಚುನಾವಣೆಗೆ ಥಳುಕು ಹಾಕುವುದು ಸರಿಯಲ್ಲ. ಚುನಾವಣೆಗೆ ಸ್ಪರ್ಧೆ ಅಧಿಕೃತ ಅಭ್ಯರ್ಥಿ ಎಂದು ಎಲ್ಲೂ ಘೋಷಣೆಯಾಗಿಲ್ಲ. ಸೀರೆ ಹಂಚುತ್ತಿದ್ದೇನೆ ಎಂದು ಬಂದಿರುವ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.

ವಿಜಯಪುರ ರಸ್ತೆಯಲ್ಲಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ನಿವಾಸದಲ್ಲಿ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತಪಾಸಣೆಗೆ ತೆರಳಿದ್ದೇವು. ಆದರೆ ಅಲ್ಲಿ ಸೀರೆ ಹಂಚಿರುವ ಕುರಿತು ನಮಗೆ ಸಂಶಯ ವ್ಯಕ್ತವಾಗಿದ್ದು ಮೌಖಿಕವಾಗಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸೀರೆ ಇರುವ ಬಗ್ಗೆ ತಪಾಸಣೆ ನಡೆಸುವಂತೆ ತಿಳಿಸಿದ್ದೇನೆ ಎಂದು ತಹಿಶೀಲ್ದಾರ್ ಎಂ.ಎಸ್.ಭಾಗವಾನ ಪ್ರತಿಕ್ರಯಿಸಿದರು.

ಪೊಲೀಸರು, ಪತ್ರಕರ್ತರೊಂದಿಗೆ ವಾಗ್ವಾದ: ಧಾರ್ಮಿಕ ಕಾರ್ಯಕ್ರಮ ಏಕಾಏಕಿ ಸ್ಥಗಿತಗೊಳಿಸುವಂತೆ ಸೂಚಿಸಲು ಬಂದ ತಹಶೀಲ್ದಾರ್, ಮುಖ್ಯಾಧಿಕಾರಿ, ಪಿಎಸ್ಸೈ ವಿರುದ್ಧ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತೀವ್ರ ಅಸಮಾಧಾನ ಹೊರಹಾಕಿದರು. ನೀತಿ ಸಂಹಿತೆ ಜಾರಿಯಾದರೆ ನಾನು ಕಾನೂನು ಬಾಹಿರವಾಗಿ ಏನನ್ನಾದರೂ ಮಾಡುತ್ತಿದ್ದರೆ ನನ್ನ ಮೇಲೆ ಪ್ರಕರಣ ದಾಖಲಿಸಿ ಎಂದು ಹೇಳಿದರು. ಈ ವೇಳೆ ವಿಡಿಯೋ ಮಾಡಿಕೊಳ್ಳುತ್ತಿದ್ದ ಪತ್ರಕರ್ತರೊಬ್ಬರೊಂದಿಗೆ ಶಾಸಕರು ಹರಿಹಾಯ್ದರಲ್ಲದೇ ಏಕವಚನದಲ್ಲಿ ನಿಂದಿಸಿದ ಘಟನೆಯೂ ನಡೆಯಿತು. ಪಿಎಸ್ಸೈ ಗೋವಿಂದಗೌಡ ಪಾಟೀಲ ಜೊತೆಯೂ ಶಾಸಕರು ಮಾತಿನ ಚಕಮಕಿ ನಡೆಸಿದರು.

By suddi9

Leave a Reply

Your email address will not be published. Required fields are marked *