ಮಂಗಳೂರು: ಧನಾತ್ಮಕ ಮನೋಭಾವ, ತನ್ನಲ್ಲಿರುವ ಸಾಮಥ್ರ್ಯ, ಪ್ರತಿಭೆಯ ಬಗ್ಗೆ ನಂಬಿಕೆ, ಸರಿಯಾದ ಆಯ್ಕೆ ಮತ್ತು ಬದ್ಧತೆ ವ್ಯಕ್ತಿಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ಜಿಂದಾಲ್ ಪಾಲಿಫಿಲ್ಸ್ಮ್‍ನ ಮಾಜಿ ಕಾರ್ಯನಿವಾಹಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐ. ಚಂದ್ರಕಾಂತ್ ರಾವ್ ಹೇಳಿದರು.
ಅವರು ಶುಕ್ರವಾರ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ತಾಂತ್ರಿಕ ಸಾಂಸ್ಕ್ರತಿಕ ಉತ್ಸವ ಆಕೃತಿ-2018 ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗಳಿಸುವುದೇ ಜೀವನದ ಉದ್ದೇಶವಲ್ಲ. ಲರ್ನಿಂಗ್, ಅರ್ನಿಂಗ್ ಹಂತದ ಬಳಿಕ ಗಿವಿಂಗ್ ಎಂಬ ಸಮಾಜದಿಂದ ಗಳಿಸಿದ್ದನ್ನು ಮರಳಿಸುವ ಮನೋಭಾವ, ಈ ನೆಲದ ಪ್ರೀತಿಯ ಮನೋಭಾವ ಅಗತ್ಯ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಉಪಾಧ್ಯಕ್ಷ ಎಂ. ಅಣ್ಣಪ್ಪ ಪೈ ಮಾತನಾಡಿ ತಾಂತ್ರಿಕ ಶಿಕ್ಷಣವನ್ನು ನೈತಿಕತೆಯೊಂದಿಗೆ ನೀಡುತ್ತಿರುವ ಕೆನರಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಗೆ ಆದ್ಯತೆ ನೀಡುತ್ತಿವೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ ಕಾಲೇಜಿನಲ್ಲಿ ಪ್ರಾಯೋಗಿಕ ಚಟುವಟಿಕೆಗಳನ್ನು ಹೆಚ್ಚಿಸಿ ಉತ್ಪಾದಕತೆಯುಳ್ಳ ಪ್ರಾಜೆಕ್ಟ್‍ಗಳನ್ನು ಅಭಿವೃದ್ಧಿ ಪಡಿಸಲು ನೂತನ ಇನ್ಕುಬೇಷನ್ ಸೆಂಟರ್ ಕಾರ್ಯಾರಂಭಿಸಲಿದೆ ಎಂದರು. ಕೆನರಾ ಎಂಜಿನಿಯರ್‍ಗಳಿಗೆ ಉದ್ಯಮರಂಗದಲ್ಲಿ ದೊರೆತಿರುವ ಹೆಸರನ್ನು ಉಳಿಸಿ ಬೆಳೆಸುವ ಕೆಲಸ ವಿದ್ಯಾರ್ಥಿಗಳಿಂದಾಗಬೇಕಿದೆ ಎಂದವರು ಹೇಳಿದರು.
ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ವಾರ್ಷಿಕ ವರದಿ ಮಂಡಿಸಿದರು. ಸಹ ಪ್ರಾಧ್ಯಾಪಕರಾದ ಎಸ್. ರವೀಂದ್ರ ಮಲ್ಯ ಅತಿಥಿಗಳನ್ನು ಪರಿಚಯಿಸಿದರು ಅಕ್ಷತಾ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಲಿಖಿತಾ, ಕೀರ್ತನಾ ಕೆ. ಪಡಿಯಾರ್ ಅನಿಸಿಕೆ, ಶುಭ ಹಾರೈಕೆ ವ್ಯಕ್ತಪಡಿಸಿದರು. ಕಾಲೇಜಿನ ಶೈಕ್ಷಣಿಕ,ಸಾಂಸ್ಕೃತಿಕ, ಕ್ರೀಡಾ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು.
ಪ್ರಸಕ್ತಸಾಲಿನಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಪ್ರಾಧ್ಯಾಪಕರುಗಳಾದ ಎನ್,ಸತೀಶ್ ಕುಮಾರ್ ಹಾಗೂ ಸುಮತಿ ಪವಾರ್ ಅವರನ್ನು ಸಮ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಸದಸ್ಯರಾದ ಕೊಚ್ಚಿಕಾರ್ ಸುಧಾಕರ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ.ಗಣೇಶ್ ಕಾಮತ್, ಕೌನ್ಸಿಲ್ ಸದಸ್ಯರಾದ ಎಂ. ರಮೇಶ್ ಕಾಮತ್, ಗೋಪಾಲ ರಾವ್, ಎಂ.ಬಿ. ಪಡಿಯಾರ್, ವಿದ್ಯಾರ್ಥಿ ಮುಖ್ಯ ಸಮನ್ವಯಕಾರ್ತಿ ಅನುಷಾ ಎ. ಪ್ರಭು, ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕ ಎಂ.ಪದ್ಮನಾಭ ಪೈ ಸ್ವಾಗತಿಸಿದರು. ಸಾಂಸ್ಕೃತಿಕ ಕಲಾಪದ ಸಮನ್ವಯಕಾರ ಎನ್.ಸತೀಶ್ ಕುಮಾರ್ ವಂದಿಸಿದರು.
ಜೀವನದಲ್ಲಿ ಎಬಿಸಿಡಿಯ ಮಹತ್ವ
ಆಂಗ್ಲ ಮಾಧ್ಯಮ ಶಿಕ್ಷಣದಲ್ಲಿ ಎಬಿಸಿಡಿಯ ಪರಿಚಯ ಎಲ್ಲರಿಗಿದೆ. ಆದರೆ ಜೀವನದಲ್ಲಿ ಕೆಲವೊಂದು ಎಬಿಸಿಡಿಗಳು ಮಹತ್ವದ್ದಾಗಿವೆ ಎಂದು ಅತಿಥಿಯಾಗಿದ್ದ ಐ. ಚಂದ್ರಕಾಂತ್ ರಾವ್ ಜೀವನದ ಸೂತ್ರವೊಂದನ್ನು ವಿವರಿಸಿದರು. ಎ ಫಾರ್ ಅಟಿಟ್ಯೂಡ್ (ಮನೋಭಾವ), ಬಿ ಫಾರ್ ಬಿಲೀಫ್(ನಂಬಿಕೆ), ಸಿ ಫಾರ್ ಚಾಯ್ಸ್, ಕಮಿಟ್‍ಮೆಂಟ್ ( ಆಯ್ಕೆ ಮತ್ತು ಬದ್ಧತೆ) ಡಿ ಫಾರ್ ಡಿಸಿಪ್ಲಿನ್(ಶಿಸ್ತು) ಇ ಫಾರ್ ಎಜುಕೇಶನ್ (ಶಿಕ್ಷಣ),ಎಫ್ ಫಾರ್ ಫೋಕಸ್ (ಪ್ರಾಮುಖ್ಯತೆ), ಜಿ ಫಾರ್ ಗೋಲ್ (ಗುರಿ) ಹೆಚ್ ಫಾರ್ ಹ್ಯುಮಿಲಿಟಿ( ನಮೃತೆ) ನಮ್ಮಲ್ಲಿದ್ದಾಗ ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದವರು ಹೇಳಿದರು.
