ಮಂಗಳೂರು: ರಾಜ್ಯದ 4ನೇ ಹಕ್ಕಿಗಳ ಹಬ್ಬವನ್ನು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಫೆ. 9 ರಿಂದ 11ರ ವರೆಗೆ ನಡೆಯಲಿದೆ.
ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಇಕೋ ಟೂರಿಸಂ ಡೆವೆಲಪ್ ಮೆಂಟ್ ಬೋರ್ಡ್ ನೇತೃತ್ವದಲ್ಲಿ ಈ ಬರ್ಡ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಈ ಹಕ್ಕಿಗಳ ಹಬ್ಬ ಯಶಸ್ವಿಯಾಗಿದೆ. ಮೊದಲ ಬಾರಿಗೆ ಈ ಬರ್ಡ್ ಫೆಸ್ಟಿವಲ್ ಮಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ.
ಈ ಹಕ್ಕಿಗಳ ಹಬ್ಬದ ವಿಷೇಶವೆಂದರೆ ಕಡಲ ಬಾನಾಡಿಗಳನ್ನು ಅತೀ ಸಮೀಪದಿಂದ ಕಣ್ತುಂಬಿಕೊಳ್ಳುವ ಹಾಗೂ ಅದರ ಛಾಯಾಗ್ರಹಣಕ್ಕೂ ಅವಕಾಶ ದೊರೆಯಲಿದೆ. ಹಕ್ಕಿಗಳ ಕುರಿತು ಆಸಕ್ತರಿಗೆ ಹಾಗು ಅಧ್ಯಯನಶೀಲರಿಗೆ ಪ್ರಯೋಜನವಾಗಲಿ ಹಾಗೂ ಸ್ಥಳೀಯರಲ್ಲೂ ಪರಿಸರದ ಹಕ್ಕಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗುತ್ತಿದೆ
ಈ ಉತ್ಸವದಲ್ಲಿ ಮಣಿಪಾಲ ಹಾಗೂ ಮಂಗಳೂರು ವ್ಯಾಪ್ತಿಯ ಬರ್ಡ್ ಫೋಟೋಗ್ರಾಫರ್ಸ್ ಹಾಗೂ ಆಸಕ್ತರು ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಗುರುಪುರ ನದಿಯ ಪಿಲಿಕುಳ ರಿವರ್ ಲಾಡ್ಜ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ ಹಾಗು ಸಂಜೆ ನಿಗದಿತ ಸಮಯದಲ್ಲಿ ಹಕ್ಕಿಗಳ ಅಧಿಕ ಸಂಚಾರವಿರುವ ಕುದುರೆಮುಖ, ಕುಂದಾಪುರ ಸೇರಿದಂತೆ ಇನ್ನಿತ ಪ್ರದೇಶಗಳಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಇವೆಲ್ಲದರ ಮಧ್ಯೆ ನುರಿತರಿಂದ ಹಕ್ಕಿಗಳ ಕುರಿತು ಛಾಯಾಚಿತ್ರ ಪ್ರದರ್ಶನ, ಸಮಾಲೋಚನಾ ಸಭೆ ಕೂಡ ನಡೆಯಲಿದೆ.

