ಮಂಗಳೂರು: ಇಂದಿನಿಂದ ಡಿ.31ರವರೆಗೆ ‘ಕರಾವಳಿ ಉತ್ಸವ’ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.
ಇಂದು ಮಧ್ಯಾಹ್ನ 3.30ಕ್ಕೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಬೃಹತ್ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ.
ಸಂಜೆ 5.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ‘ವಸ್ತು ಪ್ರದರ್ಶನ’ಕ್ಕೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಚಾಲನೆ ನೀಡುವರು.
ಸಂಜೆ 6 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಬಹುಭಾಷಾ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ.
ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಪ್ರದರ್ಶನ: ಕರಾವಳಿ ಉತ್ಸವ ವಸ್ತು ಪ್ರದರ್ಶನ ಮಂಟಪ ಹೊರ ಆವರಣದ ಮೈದಾನದಲ್ಲಿ 5.30 ರಿಂದ 7 ರವರೆಗೆ ರಾಜ್ಯದಾದ್ಯಂತದಿಂದ ಬಂದ ಕಲಾ ತಂಡಗಳು ವಿಶೇಷ ಪ್ರದರ್ಶನವನ್ನು ನೀಡಲಿದ್ದಾರೆ.
