ಕೈಕಂಬ:ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ನಮ್ಮ ನಾಯಕರಾದ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುರುಪುರ ಕೈಕಂಬದ ಪ್ರೀಮಿಯರ್ ಸಭಾಂಗಣದಲ್ಲಿ ನಡೆದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಮರನಾಥ ಶೆಟ್ಟಿಯವರು ಹೇಳಿದರು.

ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದಕ್ಕಾಗಿ ಕ್ಷೇತ್ರದ ಬೂತ್ ಸಮಿತಿಗಳ ರಚನೆಯನ್ನು ಅದಷ್ಟು ಬೇಗ ಪೂರ್ಣಗೊಳಿಸುವಂತೆ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಕುಂಞಯವರು ಹೇಳಿದರು. ಪ್ರಸ್ತುತ ರಾಜಕಾರಣ ಕಲುಷಿತಗೊಂಡಿದ್ದು ಅದನ್ನು ಸರಿಪಡಿಸಲು ಬೇಕಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಯುವ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಅಕ್ಷಿತ್ ಸುವರ್ಣರವರು ಹೇಳಿದರು. ಕುಮಾರ ಸ್ವಾಮಿ ಯವರನ್ನು ಮುಖ್ಯಮಂತ್ರಿಯಾಗಿ ಪ್ರತಿಪ್ಠಾಪಿಸಲು ಮತ್ತು ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದಕ್ಕಾಗಿ ಕ್ಷೇತ್ರದಲ್ಲಿ ಪಕ್ಷವನ್ನು ಬಲವಾಗಿ ಕಟ್ಟಲು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕ್ಷೇತ್ರದ ಅಧ್ಯಕ್ಷರಾದ ಡಿ ಪಿ ಹಮ್ಮಬ್ಬ ಹೇಳಿದರು. ಬೂತ್ ಸಮಿತಿಗಳನ್ನು ಯಾವ ರೀತಿಯಲ್ಲಿ ರಚಿಸಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸವಿಸ್ತಾರವಾಗಿ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಜೈನ್ ರವರು ತಿಳಿಸಿದರು. ಸಭೆಯಲ್ಲಿ ಹಲವರು ನಾಯಕರು ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು. ಸಭೆಯಲ್ಲಿ ಮುಖಂಡರಾದ ಎಂ ಕೆ ಖಾದರ್, ಇಕ್ಬಾಲ್ ಅಹ್ಮದ್, ಚಂದ್ರ ಶೇಖರ್ ಪೂಜಾರಿ, ಮದುಸೂದನ್ ಕೆ ಟಿ ಗೌಡ, ಫೈಝಲ್, ಸಿನಾನ್ ಮತ್ತು ಎಲ್ಲ ಪ್ರದೇಶದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ತಿತರಿದ್ದರು. ಕೆ ಎಂ ಶರೀಫ್ ಸ್ವಾಗತಿಸಿದರೆ ಝೌಹರ್ ಸಫ್ಟನ್ ವಂದಿಸಿದರು. ಇಸ್ಮಾಯಿಲ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.
