ಮಂಗಳೂರು: ಸ್ನಾನಕ್ಕೆಂದು ನೇತ್ರಾವತಿ ನದಿಗಿಳಿದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಇನೋಳಿ ನಡುಗುಡ್ಡೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ನೀರುಪಾಲಾದವರನ್ನು ವಳಚ್ಚಿಲ್ನ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಚಿತ್ರದುರ್ಗ ಮೂಲದ ಶ್ರೀರಾಮ್(21), ನಿಖಿಲ್(22) ಹಾಗೂ ಬಿಹಾರ ಮೂಲದ ಶುಭಂ(21) ಎಂದು ಗುರುತಿಸಲಾಗಿದೆ. ಈ ಪೈಕಿ ಶುಭಂ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಇವರು ಸ್ನಾನ ಮುಗಿಸಿ ಹಿಂದಿರುಗಬೇಕು ಅನ್ನುವಷ್ಟರಲ್ಲಿ ಶ್ರೀರಾಮ್ ಕಾಲು ಜಾರಿ ನದಿಗೆ ಬಿದ್ದರೆನ್ನಲಾಗಿದೆ. ಶ್ರೀರಾಮ್ ಅವರನ್ನು ರಕ್ಷಿಸಲು ಮುಂದಾಗ ನಿಖಿಲ್ ಮತ್ತು ಶುಭಂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡುಹೋದರೆನ್ನಲಾಗಿದೆ. ಉಳಿದ ಐವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೊಣಾಜೆ ಠಾಣಾ ಪೊಲೀಸರು ತೆರಳಿದ್ದು, ಶೋಧ ಕಾರ್ಯ ಮುಂದುವರಿದಿದೆ.
