ಬಡವರ ಕೊಳ್ಳೆ ಹೊಡೆವ ಮೋದಿ ಸರ್ಕಾರ : ಮುನೀರ್ ಕಾಟಿಪಳ್ಳ
ಮಂಗಳೂರು : ಚುನಾವಣೆ ವೇಳೆ ಬಿಜೆಪಿ ಪ್ರಕಟಿಸಿದ್ದ ಆಶ್ವಾಸನೆಗಳಲ್ಲಿ ಇದುವರೆಗೆ ಯಾವುದೂ ಪೂರೈಕೆಯಾಗಿಲ್ಲ. ಬದಲಾಗಿ, ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಅರ್ಥಾತ್ ಎನ್‍ಡಿಎ ಸರ್ಕಾರ ಎಲ್ಲ ರೀತಿಯಲ್ಲೂ ಜನ ವಿರೋಧಿ ನೀತಿ ಸರ್ಕಾರವಾಗಿ ಜನಸಾಮಾನ್ಯರ ಜೀವನ ಕೊಳ್ಳೆ ಹೊಡೆಯುತ್ತಿದೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಟೀಕಿಸಿದರು.
ಸಿಪಿಐಎಂ ಆಗಸ್ಟ್ 15ರಿಂದ 31ರವರೆಗೆ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆ ಖಂಡಿಸಿ ಪಕ್ಷ ದೇಶಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾದಂಗವಾಗಿ ಸಿಪಿಐಎಂ ದ ಕ ಜಿಲ್ಲಾ ಸಮಿತಿ ಮೊನ್ನೆ ಮಿಜಾರಿನ ಧೂಮಚಡವಿನಿಂದ ವಾಮಂಜೂರಿನವರೆಗೆ ನಡೆಸಿದ ಪಾದಯಾತ್ರೆ ಬಳಿಕ ವಾಮಂಜೂರು ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಭೆಯಲ್ಲಿ ಮಾತನಾಡುತ್ತಿದ್ದ ಮುನೀರ್, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಬಡವರ ಗ್ಯಾಸ್ ಸಬ್ಸಿಡಿ ರದ್ದು ಮಾಡಲಾಗಿದೆ. ಹಿಂದೆ ಆಧಾರ್ ವಿರೋಧಿಸಿದ್ದ ಬಿಜೆಪಿ ಈಗ ಆಧಾರ್ ಹೇರುತ್ತಿದೆ.

Exif_JPEG_420 ಬದ್ಧತೆ ಇಲ್ಲದ ಜಿಎಸ್‍ಟಿ ಜಾರಿಯಲ್ಲಿದೆ. ನೋಟು ನಿಷೇಧದಿಂದ ಅದಾನಿ, ಟಾಟಾದಂತಹ ಈ ದೇಶದ ಬೃಹತ್ ಕಂಪೆನಿಗಳಿಗೆ ಪ್ರಯೋಜನವಾಗಿದೆಯೇ ಹೊರತು, ಶೇ 99ರಷ್ಟು ಹಳೆ ನೋಟು ಹಿಂದಕ್ಕೆ ಬಂದಿದ್ದರೆ, ಅದರ ಪ್ರಯೋಜನ ಬಡವರಿಗಾಗಿಲ್ಲ. ಆ ಬಗ್ಗೆ ಸರ್ಕಾರ ಮಾಹಿತಿ ನೀಡಲು ನಿರಾಕರಿಸಿದೆ. ಜಿಎಸ್ಟಿ, ನೋಟು ನಿಷೇಧದಿಂದ ಬಡವರು ಇನ್ನಷ್ಟು ಕಂಗಾಲಾಗಿದ್ದರೆ, ಶ್ರೀಮಂತರ ಕೋಟ್ಯಂತರ ಕಪ್ಪು ಹಣ ತಕ್ಷಣದಿಂದ ವೈಟ್ ಆಗಿದೆ. ಮೋದಿ ಸರ್ಕಾರ ಶ್ರೀಮಂತರ ಉದ್ಧಾರಕ್ಕಾಗಿ ಎಲ್ಲ ರೀತಿಯಲ್ಲೂ ಬಡವರ ಬದುಕಿನೊಂದಿಗೆ ಆಟವಾಡುತ್ತಿದೆ. ಶಿಕ್ಷಣ ಖಾಸಗೀಕರಣ, ಕೋಮುವಾದಿ ಭಾವನೆಗೆ ಕಿಚ್ಚು ಹಚ್ಚುವಲ್ಲಿ ಈ ಸರ್ಕಾರ ಮುಂಚೂಣಿಯಲ್ಲಿದೆ ಎಂದವರು ಆರೋಪಿಸಿದರು.

munir-1 munir-2
ಚುನಾವಣಾ ಪ್ರಣಾಳಿಕೆ ಗಾಳಿಗೆ ತೂರಿರುವ ಕೇಂದ್ರ ಸರ್ಕಾರದಿಂದ ಶೇ 82ರಷ್ಟು ಶ್ರೀಮಂತರಿಗೆ `ಅಚ್ಛೇ ದಿನ್’ ಬಂದಿದೆ. ದೇಶದ ಸ್ಥಿತಿ ಎಲ್ಲ ರೀತಿಯಲ್ಲೂ ಅಧೋಗತಿಗೆ ಇಳಿದಿದೆ. ಕಾರ್ಮಿಕರು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಪ್ಪು ಹಣದ ಬಗ್ಗೆ ಭಾರೀ ಪ್ರಚಾರ ನಡೆಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಮರೆತು, ಶ್ರೀಮಂತರ ಕಪ್ಪು ಹಣ ವೈಟ್ ಮಾಡಿದ ಬಳಿಕವೇ ನೋಟು ನಿಷೇಧ ಪ್ರಕಟಣೆ ಹೊರಡಿಸಿದೆ ಮತ್ತು ಪಕ್ಷೀಯರೇ ಭ್ರಷ್ಟರಾಗಿರುವುದರಿಂದ ಭ್ರಷ್ಟಾಚಾರ ನಿರ್ಮೂಲನೆ ವಿಷಯ ಮರೆತು ಬಿಟ್ಟಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆಪಾದಿಸಿದರು.
ಕೇಂದ್ರದ ಜನ ವಿರೋಧಿ ನೀತಿಗಳಿಂದ ಸಣ್ಣ ಉದ್ದಿಮೆದಾರರು ಕಂಗಾಲಾಗಿದ್ದಾರೆ. ಕೋಟ್ಯಂತರ ಉದ್ಯೋಗ ಸೃಷ್ಟಿ ಭರವಸೆ ಲಕ್ಷದಲ್ಲೂ ಪೂರೈಕೆಯಾಗಿಲ್ಲ. ಹಿಂದೆ ಶೇ ಒಂದರಷ್ಟು ಆಸ್ತಿ ಇದ್ದವರಲ್ಲಿ ಈಗ ಶೇ 80ಕ್ಕೂ ಅಧಿಕ ಆಸ್ತಿ ಜಮೆಯಾಗಿದೆ. ಪಿಂಚಣಿ ಪಡೆಯುವಲ್ಲಿ ಜನ್ಮ ಮಾಹಿತಿ ಕೇಳಿ ಬೀಡಿ ಕಟ್ಟುವವರಿಗೆ ತೊಂದರೆಯೊಡ್ಡಲಾಗಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಹಿರಿಯ ಮುಖಂಡ ಲೋಕಯ್ಯ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಹಲವು ನಿದರ್ಶನಗಳೊಂದಿಗೆ ಟೀಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಿಪಿಐಎಂ ಜಿಲ್ಲಾ ಮುಖಂಡ ಗಂಗಯ್ಯ ಅಮೀನ್, ಸದಾಶಿವ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *